ಗೋಕಾಕ:ಗೋಕಾಕ ನೂತನ ಜಿಲ್ಲೆ ಮಾಡಿದರೆ ಸಚಿವರನ್ನು ಜನರು ದೇವರೆಂದು ಪೂಜೆ ಮಾಡುತ್ತಾರೆ : ಅಶೋಕ ಪೂಜಾರಿ
ಗೋಕಾಕ ನೂತನ ಜಿಲ್ಲೆ ಮಾಡಿದರೆ ಸಚಿವರನ್ನು ಜನರು ದೇವರೆಂದು ಪೂಜೆ ಮಾಡುತ್ತಾರೆ : ಅಶೋಕ ಪೂಜಾರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 5 :
ಇಲ್ಲಿಯ ಜನತೆಯ ಭಾವನೆಗಳನ್ನು ಅರ್ಥಮಾಡಿಕೊಂಡು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಗೋಕಾಕ ಜಿಲ್ಲೆ ಮಾಡಿದರೇ ಗೋಕಾಕ ಜನರು ರಮೇಶ ಜಾರಕಿಹೊಳಿ ಅವರನ್ನು ದೇವರೆಂದು ಪೂಜಿಸುತ್ತೇವೆ ಎಂದು ಜೆ.ಡಿ.ಎಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.
ಶನಿವಾರದಂದು ನಗರದಲ್ಲಿ ಗೋಕಾಕ ವಕೀಲರ ಸಂಘ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಸರಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರು ಎನಿಸಿಕೊಂಡಿರುವ ಸಚಿವ ರಮೇಶ ಜಾರಕಿಹೊಳಿ ಅವರು ಒಂದು ಸರಕಾರ ಕೆಡವಿ ಮತ್ತೊಂದು ಸರಕಾರ ರಚನೆ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಆದರೆ ತಮ್ಮ ಸ್ವಂತ ತಾಲೂಕನ್ನು ನೂತನ ಜಿಲ್ಲೆ ಮಾಡಲು ಆಗುತ್ತಿಲ್ಲದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಹೇಳಿದರು.
ಅರಣ್ಯ ಸಚಿವ ಆನಂದ ಸಿಂಗ ಅವರು ಗಟ್ಟಿಯಾಗಿ ನಿಂತ ಪರಿಣಾಮ ಇಂದು ವಿಜಯನಗರ ನೂತನ ಜಿಲ್ಲೆಯಾಗಿದೆ. ಅಂತಹ ನಿಲುವನ್ನು ನಮ್ಮ ಜಲಸಂಪನ್ಮೂಲ ಸಚಿವರು ತೋರಿ ಗೋಕಾಕ ನೂತನ ಜಿಲ್ಲೆಯನ್ನಾಗಿಸಲು ಶ್ರಮಿಸುವುದನ್ನು ಬಿಟ್ಟು ಗೋಕಾಕ ಅಥವಾ ಚಿಕ್ಕೋಡಿಯವರಲ್ಲಿ ಯಾರಾದರೂ ಒಬ್ಬರು ಹಿಂದೆ ಸರಿದರೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಸಾಧ್ಯ ಎಂದು ಹೇಳಿರುವುದು ಸರಿಯಲ್ಲ.
ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ನೂತನ ಜಿಲ್ಲೆ ಮಾಡುವುದರಿಂದ ಆಡಳಿತಾತ್ಮಕವಾಗಿ ಅಧಿಕಾರ ವಿಕೇಂದ್ರೀಕರಣವಾಗಿ ಅಭಿವೃದ್ಧಿಹೊಂದಲು ಸಾಧ್ಯ ಆ ನೀಟಿನಲ್ಲಿ ತಕ್ಷಣದಲ್ಲಿ ಬೆಳಗಾವಿಯನ್ನು ವಿಭಜಿಸಿ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿಸಲು ಸಚಿವ ರಮೇಶ ಜಾರಕಿಹೊಳಿ ಅವರು ಮನಸ್ಸು ಮಾಡಬೇಕು.
ಗೋಕಾಕ ಜಿಲ್ಲೆ ನಮ್ಮ ಜನ್ಮಸಿದ್ದ ಹಕ್ಕು, ಅದನ್ನು ಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಈ ನಮ್ಮ ಬೇಡಿಕೆ ರಾಜಕೀಯ ಅಲ್ಲ ಬೇಡಿಕೆಯಲ್ಲ ಇದು ನಮ್ಮ ಪ್ರಮಾಣಿಕ ಬೇಡಿಕೆಯಾಗಿದ್ದು ಗೋಕಾಕ ನಾಗರೀಕರ ಭಾವನೆಗಳಗೆ ಸ್ವಂದಿಸಿ ಸಚಿವರು ಗೋಕಾಕ ಜಿಲ್ಲೆ ಮಾಡಲು ಸರಕಾರ ಮಟ್ಟದಲ್ಲಿ ಶ್ರಮಿಸಬೇಕೆಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಉದಯ ಶಿಂಪಿ ಮಾತನಾಡಿ ಹಿಂದಿನ ಸರಕಾರಗಳೇ ನೇಮಿಸಿದ್ದ ವಾಸುದೇವ, ಹುಂಡೆಕರ ಹಾಗೂ ಗದ್ದಿಗೌಡರ ಆಯೋಗಳು ಗೋಕಾಕ ಜಿಲ್ಲೆಯಾಗಲು ಸೂಕ್ತವೆಂದು ವರದಿ ಸಲ್ಲಿಸಿದರೂ ಸರಕಾರಗಳು ಗೋಕಾಕನ್ನು ನೂತನ ಜಿಲ್ಲೆ ಎಂದು ಘೋಷಣೆ ಮಾಡಿಲ್ಲ. ಕಳೆದ ನಾಲ್ಕು ದಶಕಗಳಿಂದಲೂ ಗೋಕಾಕ ಜಿಲ್ಲೆಗಾಗಿ ಹಲವಾರು ರೀತಿಯ ಹೋರಾಟ ಮಾಡಿದರು ಸಹ ಸರಕಾರ ಇಲ್ಲಿಯವರೆಗೆ ಪೂಕರವಾದಂತಹ ಕ್ರಮ ಜರುಗಿಸಿಲ್ಲ ಮುಂದಿನ ದಿನಗಳಲ್ಲಿ ಗೋಕಾಕ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಗೋಕಾಕ ಜಿಲ್ಲೆಗಾಗಿ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಾಗುವುದು. ವಕೀಲ ಸಂಘದಿಂದ ಸಚಿವರನ್ನು ಬೇಟಿಯಾಗಿ ಮುಖ್ಯಮಂತ್ರಿಗಳಿಗೆ ಗೋಕಾಕ ಜಿಲ್ಲೆಯನ್ನಾಗಿಸಲು ಮನವಿ ಮಾಡಲಾಗುವುದು ಸಚಿವರು ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತು ಗೋಕಾಕ ಜಿಲ್ಲೆಯನ್ನಾಗಿಸಲು ಮುಂದಾಗಬೇಕು. ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಶಶಿಧರ ದೇಮಶೆಟ್ಟಿ ಮಾತನಾಡಿ ಗೋಕಾಕ ಜಿಲ್ಲೆಗೆ ಪ್ರಾಣ ಕೊಡಲು ಸಿದ್ದ. ಬೆಳಗಾವಿ ಜಿಲ್ಲೆ ವಿಭಜಿಸಿ ಮೊದಲು ಗೋಕಾಕ ಜಿಲ್ಲೆ ಮಾಡಿ ನಂತರ ಬೇರೆ ತಾಲೂಕುಗಳನ್ನು ಜಿಲ್ಲೆಯನ್ನಾಗಿಸಲು ನಮ್ಮ ಅಭ್ಯಂತರವಿಲ್ಲ . ಸಚಿವರು ಮುತುವರ್ಜಿ ವಹಿಸಿ ಗೋಕಾಕ ಜಿಲ್ಲೆಯನ್ನು ಮಾಡಲು ಪ್ರಯತ್ನಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿ.ಡಿ ಹುಕ್ಕೇರಿ, ದಸ್ತಗೀರ ಪೈಲವಾನ, ಪ್ರಕಾಶ ಭಾಗೋಜಿ, ವ್ಹಿ.ಎಚ್.ಗಡನ್ನವರ, ಗಂಗಾಧರ ಭಟ್ಟಿ, ಸಿ.ಬಿ ಗಿಡ್ಡನವರ ಸೇರಿದಂತೆ ಅನೇಕರು ಇದ್ದರು.