ಗೋಕಾಕ:SSLC EXM : ಶಿಕ್ಷಣ ಇಲಾಖೆ ಮತ್ತು ತಾಲೂಕಾಡಳಿತ ಅಗತ್ಯ ಮುಂಜಾಗೃತ ಕ್ರಮ : ಬಿಇಓ ಬಳಗಾರ ಮಾಹಿತಿ
SSLC EXM : ಶಿಕ್ಷಣ ಇಲಾಖೆ ಮತ್ತು ತಾಲೂಕಾಡಳಿತ ಅಗತ್ಯ ಮುಂಜಾಗೃತ ಕ್ರಮ : ಬಿಇಓ ಬಳಗಾರ ಮಾಹಿತಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 21 :
ಕೊರೋನಾ ಆತಂಕದ ಹಿನ್ನಲೆಯಲ್ಲಿ ಮುಂದೂಡಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಜೂನ್-25 ರಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲೂಕಾಡಳಿತ ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವ ಮೂಲಕ ಪರೀಕ್ಷೆ ಯಸಸ್ವಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ರವಿವಾರದಂದು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಿದ್ದರು.
ಎಸ್‍ಎಸ್‍ಎಲ್‍ಸಿ ಪೂರ್ವಭಾವಿಯಾಗಿ ಕಳೆದ ಹಲವಾರು ದಿನಗಳಿಂದ ಸುಮಾರು 8 ಸಭೆಗಳನ್ನು ನಡೆಸಿ, ಗೋಕಾಕ ವಲಯದಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಒಟ್ಟು ಕೊಠಡಿಗಳ ಸಂಖ್ಯೆ 226 ಇದ್ದು, ಹೆಚ್ಚುವರಿ 3 ಪ್ರತಿರೂಪ ಕೇಂದ್ರಗಳನ್ನು ತೆರೆಯಲಾಗಿದೆ. ಗಂಡು-2316, ಹೆಣ್ಣು 1930, ಪುನರಾವರ್ತಿತ-74, ವಲಸೆ 70 ಒಟ್ಟು 4390 ವಿದ್ರ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ಕೊಠಡಿಯಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಹೆಚ್ಚಿಸುವ ಸಲುವಾಗಿ, ಪರೀಕ್ಷಾ ಭಯ ನಿವಾರಣೆಗೆ ಮತ್ತು ಆತ್ಮಸೈರ್ಯವನ್ನು ತುಂಬಲು ವಲಯದ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಮೋಬಾಯಿಲ್ ಮೂಲಕ ಸಂಪರ್ಕಿಸಿ ಶ್ರಮವಹಿಸಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಪರೀಕ್ಷೆ ನಡೆಯುವ 3 ದಿನಗಳ ಮುಂಚೆ, ಪರೀಕ್ಷೆಯ ಹಿಂದಿನ ದಿನ ಮತ್ತು ಒಂದೊಂದು ವಿಷಯಗಳ ಪರೀಕ್ಷೆ ಮುಗಿದ ನಂತರ ಸ್ಯಾನಿಟೈಸರ್ ಸಿಂಪಡಣೆ ಮಾಡಲು ಸ್ಥಳೀಯ ಗ್ರಾ.ಪಂ. ಪ.ಪಂ. ಪುರಸಭೆ, ನಗರಸಭೆಯವರಿಗೆ ಸೂಚಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಪರೀಕ್ಷೆ ಮುಗಿಯುವರೆಗೂ ಕಾರ್ಯನಿರ್ವಹಿಸಲಿದ್ದು ಒರ್ವ ಸ್ಟಾಪ್ ನರ್ಸ ಎ.ಎನ್.ಎಮ್. ಸಿಬ್ಬಂದಿಯಿಂದ ಪ್ರಥಮ ಚಿಕಿತ್ಸೆಗೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೆ ಪ್ರವೇಶಿಸುವ ಪರೀಕ್ಷಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ 7.30 ಗಂಟೆಗೆ ಸ್ಥಳದಲ್ಲಿ ಇರಲು ಸೂಚಿಸಲಾಗಿದ್ದು ಅವರಿಗೆ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಈಗಾಗಲೇ ವಿದ್ಯಾರ್ಥಿಗಳಿಗೆ ಮಾಸ್ಕ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷೆ ವೇಳೆ ಯಾವುದೇ ವಿದ್ಯಾರ್ಥಿ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದು ಕಂಡು ಬಂದರೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೆಕ್ಷನ್ 144 ಕಲಂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪಾಲಕರು ಪರೀಕ್ಷಾ ಕೇಂದ್ರಗಳತ್ತ ಸುಳಿಯಬಾರದು. ಭದ್ರತೆಗೆಗಾಗಿ ಪೋಲೀಸ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಫೋನ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಪ್ರಕಾರ ಪರೀಕ್ಷೆಗೆ ಹಾಜರಾಗಲು 28 ರೂಟ್‍ಗಳನ್ನು ಗುರಿತಿಸಲಾಗಿದ್ದು, 49 ಕೇರ್ ಟೇಕರ್‍ರನ್ನು ನಿಯೋಜಿಸಲಾಗಿದೆ. 38 ಬಸ್, 7 ಖಾಸಗಿ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ವಂತ ವಾಹನದಲ್ಲಿ 2085, ಕಾಲ್ನಡಿಗೆಯಿಂದ 1538. ಬಸ್ ಮುಖಾಂತರ 697 ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಹೆಲ್ಪ್ ಡೆಸ್ಕ್: ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಶಿಕ್ಷಕರನ್ನೊಳಗೊಂಡ ಹೆಲ್ಪ್ ಡೇಸ್ಕ್ ತೆರೆಯಲಾಗುವುದು. ಈಗಾಗಲೇ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಕೇಂದ್ರ, ಕೊಠಡಿ ಸಂಖ್ಯೆ, ಡೆಸ್ಕ್ ಇರುವ ಸ್ಥಳವನ್ನು ಖಚಿತ ಪಡಿಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಮೋಬಾಯಲ್‍ಗಳನ್ನು ಬಳಕೆ ನಿಷೇಧಿಸಲಾಗಿದೆ.
ಸಾಮಾಜಿಕ ಅಂತರ ಕಾಪಾಡಿ: ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಪರೀಕ್ಷೆಗೆ ಅವಶ್ಯಕವಿರುವ ವಸ್ತುಗಳನ್ನು ತರಬೇಕು. ಶುದ್ಧ ಕುಡಿಯುವ ನೀರು, ಉಪಹಾರ, ತಮಗೆ ಅಗತ್ಯವಿರುವ ಮೇಡಿಷನ್ ತರಬೇಕು. ಪಾಲಕರು ಪರೀಕ್ಷೆ ನಿರ್ಭಯವಾಗಿ ಸುಸೂತ್ರವಾಗಿ ನಡೆಯಲು ಶಿಕ್ಷಣ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಸಿ.ಸಿ.ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆಗಳು ಜರುಗಲಿವೆ.
ಸಹಾಯವಾಣಿ: ಪರೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೊ.9480695043-9902715414, ನೂಡಲ್ ಅಧಿಕಾರಿ ಬಿ.ಎಮ್.ವಣ್ಣೂರ 9448191916, ಬಿಆರ್‍ಸಿ ಸಮನ್ವಯ ಅಧಿಕಾರಿ 9480695057 ಸಂಪರ್ಕಿಸಬಹುದು.