ಗೋಕಾಕ:14 ವರ್ಷಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣ ಪಡಿಸಲಾಗಿದೆ : ಜಯಾನಂದ ಮುನವಳ್ಳಿ
14 ವರ್ಷಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣ ಪಡಿಸಲಾಗಿದೆ : ಜಯಾನಂದ ಮುನವಳ್ಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 16 :
ನಗರದಲ್ಲಿ 2006ರಲ್ಲಿ ಪ್ರಾರಂಭಗೊಂಡ ಕೆಎಲ್‍ಇ ಆಸ್ಪತ್ರೆ ಹಣಕ್ಕಿಂತ ಜನರ ಸೇವೆಗೆ ಹೆಚ್ಚಿನ ಮಹತ್ವ ನೀಡಿ 14 ವರ್ಷಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣ ಪಡಿಸಲಾಗಿದೆ ಎಂದು ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ಶನಿವಾರದಂದು ನಗರದ ಕೆಎಲ್‍ಇ ಆಸ್ಪತ್ರೆಯಲ್ಲಿ 7 ತಿಂಗಳಲ್ಲಿ ಜನಿಸಿದ 750 ಗ್ರಾಂ. ತೂಕವುಳ್ಳ ಎರಡು ನವಜಾತ ಶಿಶುಗಳಿಗೆ ಉಚಿತ ಚಿಕಿತ್ಸೆ ನೀಡಿ ಅವುಗಳನ್ನು ಬದುಕಿಸಿ ಅವರ ತಾಯಿಂದಿರಿಗೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಇಲ್ಲಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ಲಭ್ಯವಿದ್ದು ನುರಿತ ವೈದ್ಯರು 24 ಗಂಟೆ ಕಾಲ ಚಿಕಿತ್ಸೆ ನೀಡುತ್ತಿದ್ದಾರೆ. ಈ 7 ತಿಂಗಳಲ್ಲಿ ಜನಿಸಿದ ಶಿಶುಗಳು ಬದುಕುವ ಸಂಭವ ತೀರಾ ಕಡಿಮೆ. ಈ ಶಿಶುಗಳಿಗೆ ಆಯುಷ್ಮಾನ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಯೋಜನೆಯಡಿ 4 ತಿಂಗಳಿನಿಂದ ನೂರು ನವಜಾತ ಶಿಶುಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಈ ಯೋಜನೆಯಡಿ ಎಲ್ಲ ರೀತಿಯ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು ಜನತೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು ಈ ಆಸ್ಪತ್ರೆ ದೇವಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ. ಮಹಾಮಾರಿ ಕೋರೋನಾ ಸಂದಿಗ್ಧ ಸಂದರ್ಭದಲ್ಲೂ ವಿಷಪೂರಿತ ಹಾವು ಕಚ್ಚಿದ ಹಾಗೂ ಇತರ ರೋಗಿಗಳ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಇಲ್ಲಿಯ ಕೆಎಲ್‍ಇ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಡಿ.ಜಿ.ಚೌಗಲಾ, ಚಿಕ್ಕಮಕ್ಕಳ ತಜ್ಞ ಡಾ. ಅರುಣ ವಣ್ಣೂರ, ರೂಪಾ ಮುನವಳ್ಳಿ ಇದ್ದರು.