ಕೌಜಲಗಿ:ಕೊರೊನಾ ಜಾಗೃತಿ ಕುಲಗೋಡ ಪೋಲಿಸರ ಬೈಕ್ ರ್ಯಾಲಿ
ಕೊರೊನಾ ಜಾಗೃತಿ ಕುಲಗೋಡ ಪೋಲಿಸರ ಬೈಕ್ ರ್ಯಾಲಿ
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಎ 21 :
ಸಮೀಪದ ಕುಲಗೋಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿಯ 42 ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೋಮವಾರದಂದು ಕುಲಗೋಡ ಪೋಲಿಸರಿಂದ ಬೈಕ್ ರ್ಯಾಲಿ ಜಾಥಾ ಹಮ್ಮಿಕೊಳ್ಳಲಾಯಿತು.
ಪಿ.ಎಸ್.ಐ. ಎಚ್.ಕೆ.ನೇರಳೆ ಅವರ ನೇತೃತ್ವದಲ್ಲಿ ದ್ವಿಚಕ್ರ ವಾಹನ ಜಾಥಾ ಕಾರ್ಯಕ್ರಮ ಏರ್ಪಡಿಸಲಾಯಿತು. 42 ಗ್ರಾಮಗಳ ಪ್ರಮುಖ ಬೀದಿ ಬೀದಿಗಳಲ್ಲಿ ಪೋಲಿಸರು ಸಂಚರಿಸಿ ಕೊರೊನಾ ಲಾಕ್‍ಡೌನ್ ಮತ್ತಷ್ಟು ಬಿಗಿ ಗೊಳಿಸಲಾದ ಸಂದೇಶವನ್ನು ಬೈಕ್ ರ್ಯಾಲಿ ಮೂಲಕ ಜನರಿಗೆ ತಿಳಿಸಿದರು.
ಪೋಲಿಸ್ ಠಾಣೆಯ ವ್ಯಾಪ್ತಿಯ 42 ಹಳ್ಳಿಗಳ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊರೊನಾ ಸೊಂಕು ತಡೆಗಟ್ಟುವಿಕೆಯಲ್ಲಿ ಮತ್ತಷ್ಟು ಬಿಗಿ ಬಂದೋಬಸ್ತನ್ನು ಮಾಡಲಾಗಿದ್ದು ಸಾರ್ವಜನಿಕರು ಅನವಶ್ಯಕವಾಗಿ ರಸ್ತೆಯ ಮೇಲೆ ಸಂಚರಿಸಬಾರದು. ಪ್ರತಿ ವಾಹನಕಾರರನ್ನು ಕಡ್ಡಾಯವಾಗಿ ಪರಿಶೀಲಿಸಲಾಗುವುದು. ಸಂಶಯಾಸ್ಪದವಾಗಿ ಓಡಾಡುವವರ ವಾಹನ ವಶಪಡಿಸಿಕೊಳ್ಳಲಾಗುವುದು ಎಂದು ಪಿ.ಎಸ್.ಐ. ಎಚ್.ಕೆ.ನೇರಳೆ ತಿಳಿಸಿದರು. ಅ
ಬೈಕ್ ರ್ಯಾಲಿಯಲ್ಲಿ ಮುಂದುವರೆಸಿ ಮಾತನಾಡಿದ ನೇರಳೆಯವರು, ಜನರು ಗುಂಪು ಗುಂಪಾಗಿ ಸೇರದೆ ಮನೆಯಲ್ಲಿರಬೇಕು. ಪ್ರಾರ್ಥನೆಗಳನ್ನು ನಿಷೇಧಿಸಲಾಗಿದೆ. ಕೊರೊನಾ ಮಹಾಮಾರಕವನ್ನು ಜನರು ಗಂಭೀರವಾಗಿ ಪರಿಗಣಿಸಿ ಭಯ ಪಡದೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಕೊರೊನಾ ತಡೆಗಟ್ಟಲು, ಸರಕಾರದ ನಿರ್ದೇಶನಗಳು ಜಾರಿಗತಗೊಳ್ಳಲು ಪೋಲಿಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ರ್ಯಾಲಿಯಲ್ಲಿ ಠಾಣೆಯ ಎ.ಎಸ್.ಐ. ಸೇರಿದಂತೆ ಎಲ್ಲ ಪೋಲಿಸ್ ಸಿಬ್ಬಂದಿ ಹಾಜರಿದ್ದರು.