ಗೋಕಾಕ:ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೇ ಶಿಕ್ಷಣದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು: ಲಖನ್ ಜಾರಕಿಹೊಳಿ

ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೇ ಶಿಕ್ಷಣದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು: ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 13 :
ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೇ ಶಿಕ್ಷಣದ ಕಡೆಗೆ ಹೆಚ್ಚಿನ ಮಹತ್ವ ಕೊಟ್ಟು, ಕುಟುಂಬ, ಸಮಾಜ ಹಾಗೂ ದೇಶವನ್ನು ಮುನ್ನಡೆಸುವ ಸಾಮಥ್ರ್ಯ ಹೊಂದಬೇಕಾಗಿದೆ ಎಂದು ಯುವ ಧುರೀಣ ಹಾಗೂ ಮಯೂರ ಸ್ಕೂಲ್ ಚೇರಮನ್ ಲಖನ್ ಜಾರಕಿಹೊಳಿ ಹೇಳಿದರು.
ಜಿಲ್ಲಾ ಪಂಚಾಯತ್, ತಾಲೂಕಾಡಳಿತ, ತಾಲೂಕಾ ಪಂಚಾಯತ್, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ನಗರದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಂದೆ-ತಾಯಿ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಬೆಳೆಯಬೇಕು. ನಮ್ಮ ತಂದೆ ತಾಯಿಯವರು ಎಲ್ಲ ಸಮುದಾಯದ ಹಾಗೂ ಎಲ್ಲ ಜನಾಂಗದದವರ ನೋವು ನಲಿವು, ಕಷ್ಟ ನಷ್ಟಗಳಿಗೆ ಸ್ಪಂದಿಸುವ ಗುಣವುಳ್ಳವರಾಗಿದ್ದರು. ಅದೇ ರೀತಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೂ ಕೂಡ ಎಲ್ಲ ಜಾತಿ, ಜನಾಂಗದ ಜನರ ಕಷ್ಟಗಳಿಗೆ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ನಗರದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀ ಬಸವೇಶ್ವರ ವೃತ್ತಗಳ ಮೂಲಕ ಮೆರವಣಿಗೆಯು ಹಾಯ್ದು ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ಸೇರಿತು.
ಇದೇ ಸಂದರ್ಭದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ಪರಿಶಿಷ್ಠ ಪಂಗಡಗಳ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಹಾಗೂ ಲಕ್ಷ್ಮೀ ಏಜ್ಯುಕೇಶನ್ ಟ್ರಸ್ಟ್ ವತಿಯಿಂದ ಪಿಯುಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಹೂನ್ನೂರ-ಜಮಖಂಡಿಯ ಸರ್ಕಾರಿ ಪದೆಥಮ ದರ್ಜೆ ಕಾಲೇಜಿನ ಕನ್ನಡ ಪ್ರಾದ್ಯಾಪಕರಾದ ಡಾ. ವಾಯ್.ವಾಯ್.ಕೊಕ್ಕನವರ ಅವರು ಶ್ರೀ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಸಂತೋಷ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಬಸವರಾಜ ಸಾಯಣ್ನವರ, ಅಶೋಕ ಸಾಯಣ್ಣವರ, ಸಮಾಜದ ಹಿರಿಯರಾದ ಲಕ್ಕಪ್ಪ ಪೂಜೇರಿ, ಶಿವಪ್ಪ ಗುಡ್ಡಾಕಾರ, ತಾ.ಪಂ. ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಕ, ತಹಶೀಲ್ದಾರರಾದ ಪ್ರಕಾಶ ಹೊಳೆಪ್ಪಗೋಳ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಬಿ.ಬಳಗಾರ, ಎ.ಸಿ.ಮನ್ನಿಕೇರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಿಕ, ನಗರಸಭೆ ಪೌರಾಯುಕ್ತ ಎಸ್.ಎಮ್.ಹಿರೇಮಠ, ಪರಿಶಿಷ್ಟ ವರ್ಗಗಳ ತಾಲೂಕಾ ಕಲ್ಯಾಣಾಧಿಕಾರಿ ಜಯಶ್ರೀ ಗೋಟೂರಿ, ವಿವಿಧ ಇಲಾಖೆಯ ಅಧಿಕಾರಿಗಳಾದ ವಣ್ಣೂರ, ವರಾಳೆ, ನದಾಫ್, ಜನ್ಮಟ್ಟಿ, ಕಲ್ಲಪ್ಪನವರ, ಡಬ್ಬನವರ, ಕೆಂಪಣ್ಣಾ ಕೊಣ್ಣೂರ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಜನ ಪ್ರತಿನಿಧಿಗಳು ಹಾಜರಿದ್ದರು.