ಗೋಕಾಕ:ಗಂಜಿ ಕೇಂದ್ರಗಳಿಗೆ ತ್ವರಿತ ವೈದ್ಯಕೀಯ ಸ್ವಂದನಾ ತಂಡ ಭೇಟಿ : ಅಗತ್ಯ ವೈದ್ಯಕೀಯ ಸೌಲಭ್ಯಗಳ ಪೂರೈಕೆ

ಗಂಜಿ ಕೇಂದ್ರಗಳಿಗೆ ತ್ವರಿತ ವೈದ್ಯಕೀಯ ಸ್ವಂದನಾ ತಂಡ ಭೇಟಿ : ಅಗತ್ಯ ವೈದ್ಯಕೀಯ ಸೌಲಭ್ಯಗಳ ಪೂರೈಕೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 6 :
ಕಳೆದ ಮೂರನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಭಾಗಶಃ ಗೋಕಾಕ ತಾಲೂಕು ತತ್ತರಿಸಿ ಹೋಗಿದ್ದು , ಮಾರ್ಕಂಡೇಯ- ಘಟಪ್ರಭಾ- ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿದ್ದು ನದಿ ದಂಡೆಯ ಗ್ರಾಮಗಳು ಹಾಗೂ ನಗರದ ಉಪ್ಪಾರ ಓಣಿ, ಬೊಜಗಾರ ಓಣಿ,ಕುಂಬಾರ ಓಣಿ, ಅನಾರ ಮೋಹಲ್ಲಾ (ದಾಳಂಬ್ರಿ ತೋಟ) , ಕಿಲ್ಲಾ , ಬಣಗಾರ ಓಣಿ, ಢೋರ ಓಣಿ, ಕಲಾಲ ಓಣಿ ಸಂಪೂರ್ಣ ಜಾಲಾವೃತ ಗೊಂಡಿವೆ .
ಇಲ್ಲಿಯ ಜನರನ್ನು ಸುರಕ್ಷಿತವಾಗಿ ನಗರದಲ್ಲಿ ತೆರೆಯಲಾದ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ನಗರದಲ್ಲಿ ತೆರೆಯಲಾಗಿದ್ದ ನಾಲ್ಕು ಗಂಜಿ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತ್ವರಿತ ವೈದ್ಯಕೀಯ ಸ್ವಂದನಾ ತಂಡದವರು ಭೇಟಿ ನೀಡಿ ಆಹಾರ ಹಾಗೂ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಅಗತ್ಯ ವೈದ್ಯಕೀಯ ಸೇವೆಯನ್ನು ಒದಗಿಸಿದರು. ಈ ತಂಡ ತಾಲೂಕಿನಲ್ಲಿ ತೆರೆದಿರುವ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ಒದಗಿಸಲಿದೆ.