ಗೋಕಾಕ:ಡಿಕೆಶಿ ಅಣುಕು ಶವಯಾತ್ರೆ ನಡೆಯಿಸಿ , ಪ್ರತಿಕೃತಿ ದಹಿಸಿ ಸಾವಕಾರ್ ಅಭಿಮಾನಿಗಳ ಬೃಹತ್ ಪ್ರತಿಭಟನೆ
ಡಿಕೆಶಿ ಅಣುಕು ಶವಯಾತ್ರೆ ನಡೆಯಿಸಿ , ಪ್ರತಿಕೃತಿ ದಹಿಸಿ ಸಾವಕಾರ್ ಅಭಿಮಾನಿಗಳ ಬೃಹತ್ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 28 :
ಶಾಸಕ ರಮೇಶ ಜಾರಕಿಹೊಳಿ ಅವರ ನಕಲಿ ಸಿಡಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಕೈವಾಡವಿದೆ ಎಂದು ಖಂಡಿಸಿ ಇಲ್ಲಿನ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದವರು ಡಿ.ಕೆ. ಶಿವಕುಮಾರ ಅವರ ಅಣುಕು ಶವಯಾತ್ರೆ ನಡೆಯಿಸಿ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರವಿವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಶಾಸಕ ರಮೇಶ ಅವರ ಸಾವಿರಾರು ಅಭಿಮಾನಿಗಳು ಬಸವೇಶ್ವರ ವೃತ್ತದವರೆಗೆ ಡಿಕೆಶಿ ಅವರ ಅಣುಕು ಶವಯಾತ್ರೆ ನಡೆಯಿಸಿದರು.
ಬಸವೇಶ್ವರ ವೃತ್ತದಲ್ಲಿ ಡಿಕೆಶಿ ಪ್ರತಿಕೃತಿ ದಹಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ತಕ್ಷಣ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಅವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಮಹಿಳೆಯನ್ನು ಮುಂದಿಟ್ಟುಕೊಂಡು ಷುಲ್ಲಕ ರಾಜಕಾರಣ ಮಾಡುತ್ತಿರುವ ಶಿವಕುಮಾರ ಅವರಿಗೆ ತಕ್ಕಪಾಠ ಕಲಿಸವಂತೆ ಸರಕಾರವನ್ನು ಆಗ್ರಹಿಸಿದರು. ರಮೇಶ ಜಾರಕಿಹೊಳಿ ಮಂತ್ರಿಯಾಗಿ , ಜನಪ್ರಿಯ ಯೋಜನೆಗಳನ್ನು ಹಮ್ಮಿಕೊಂಡು, ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಸಹಿಸದ ಡಿಕೆಶಿ ಇಂತಹ ವಾಮ ಮಾರ್ಗ ಅನುಸರಿಸುತ್ತಿರುವದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.