ಮೂಡಲಗಿ:ಸ್ವಾರ್ಥ ವ್ಯಕ್ತಿಗಳಿಂದ ಮೂಡಲಗಿ ಪಟ್ಟಣ ಅಭಿವೃದ್ಧಿಗೆ ಅಡ್ಡಿ: ರಮೇಶ ಸಣ್ಣಕ್ಕಿ ಆರೋಪ
ಸ್ವಾರ್ಥ ವ್ಯಕ್ತಿಗಳಿಂದ ಮೂಡಲಗಿ ಪಟ್ಟಣ ಅಭಿವೃದ್ಧಿಗೆ ಅಡ್ಡಿ: ರಮೇಶ ಸಣ್ಣಕ್ಕಿ ಆರೋಪ
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜು 25 :
ಮೂಡಲಗಿ ಪುರಸಭೆಯ 2018-19 ಸಾಲಿನ ಅನುದಾನದಲ್ಲಿ ಮಂಜೂರಾಗಿ ಟೆಂಡರ್ ಆಗಿರುವ ಮತ್ತು 2019-20ನೇ ಸಾಲಿನ ಅನುದಾನದಲ್ಲಿ ಕ್ರಿಯಾ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಯಥಾವತ್ತಾಗಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಪುರಸಭೆಯ ಬಿಜೆಪಿ ಸದಸ್ಯರು ಮತ್ತು ಸಾರ್ವಜನಿಕರು ಗುರುವಾರ ಪಟ್ಟಣದ ಕಲ್ಮೇಶ್ವರ ವೃತದಲ್ಲಿ ಪ್ರತಿಭಟಿಸಿ, ನಂತರ ಮೆರವಣಿಗೆ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿ-ತಹಶೀಲ್ದಾರ ಅವರ ಮುಖಾಂತಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ರಮೇಶ ಸಣ್ಣಕ್ಕಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಕಳೆದ 15 ವರ್ಷಗಳಲ್ಲಿ ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಿಲ್ಲ. ಆದರೆ ಪಟ್ಟಣದ ಕೆಲವೇ ಕೆಲವು ಸ್ವಾರ್ಥ ಮುಖಂಡರು ಅಭಿವೃದ್ಧಿ ಸಹಿಸÀದೆ ವಿನಾಃಕಾರಣ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತವರಿಗೆ ಕಳೆದ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಿದ್ದರೂ, ಇನ್ನು ಬುದ್ದಿ ಬಂದಿಲ್ಲ. ಅಲ್ಲದೇ ಮೂಡಲಗಿಗೆ ಬರುವ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ವಿರೋಧಿಗಳ ಆರೋಪ ನಿರಾಧಾರ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ, ಡಾ: ಎಸ್.ಎಸ್.ಪಾಟೀಲ, ಶಿವು ಚಂಡಕಿ, ಹನಮಂತ ಗುಡ್ಲಮನಿ, ರಾವತ ಝಂಡೇಕುರಬರ, ಮಲ್ಲು ಯಾದವಾಡ ಮತ್ತಿತರರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಾಮಥ್ರ್ಯದಿಂದಲೇ ಮೂಡಲಗಿ ಪಟ್ಟಣಕ್ಕೆ ಹೊಸ ತಾಲೂಕು ಸ್ಥಾನ ಮಾನ ದೊರೆತಿದೆ ಅದರಲ್ಲೂ ಪುರಸಭೆಗೆ ಸರಕಾರದಿಂದ ಹೆಚ್ಚಿನ ಅನುದಾನ ತಂದಿದ್ದಾರೆ, ಪ್ರತಿ ವಾರ್ಡಗಳಲ್ಲೂ ಅಭಿವೃದ್ಧಿಗೆ ಅಧ್ಯತೆ ನೀಡುತ್ತಿದ್ದಾರೆ, ಆದರೆ ವಿರೋಧಿಗಳು ಮಾತ್ರ ಕೆಲವೊಂದು ವಾರ್ಡಗಳಲ್ಲಿ ಅಭಿವೃದ್ಧಿ ಮಾಡಿಲ್ಲವೆಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅವರಿಗೆ ಜನರ ಹಿತಾಸಕ್ತಿ ಮುಖ್ಯವಲ್ಲ. ಕೇವಲ ಸ್ವಾರ್ಥ ಸಾಧನೆಗಾಗಿ ಹಾಗೂ ಪ್ರಚಾರಕ್ಕಾಗಿ ಧರಣಿ-ಸತ್ಯಾಗ್ರಹ ಮಾಡುತ್ತಿದ್ದಾರೆ. ಮತದಾರರಿಂದ ತಿರಸ್ಕøತಗೊಂಡು ನಿರುದ್ಯೋಗಿ ರಾಜಕಾರಣಿಯಾಗಿರುವ ಅಂತವರಿಗೆ ಮಾಡುವ ಕೆಲಸ ಬೇರೊಂದಿಲ್ಲ ಎಂದು ವಿರೋಧಿಗಳ ಪ್ರತಿಭಟನೆಗೆ ಹರಿಹಾಯ್ದರು.
ಕಾಮಗಾರಿ ಯಥಾವತ್ತಾಗಿ ಮುಂದುವರಿಸಿ: ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ಯಥಾವತ್ತಾಗಿ ಮುಂದುವರಿಸಬೇಕು ಈ ಕಾಮಗಾರಿಗಳನ್ನು ಕೈಗೊಳ್ಳುವದನ್ನು ವಿಳಂಬ ಅಥವಾ ರದ್ದು ಮಾಡಿದರೆ ಸಾರ್ವಜನಿಕರೊಂದಿಗೆ ಸೇರಿಕೊಂಡು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 2019-20 ಸಾಲಿನ ಅನುದಾನದಲ್ಲಿ ಮೂಡಲಗಿ ಪುರಸಭೆ ಅಧಿಕಾರಿಗಳು ವಾರ್ಡ ನಂ 1,2,5, 11ರಿಂದ 23 ರವರೆಗಿನ ವಾರ್ಡಗಳಲ್ಲಿ ಯಾವುದೇ ತಾರತಮ್ಯ ಮಾಡದೇ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಪುರಸಭೆಯವರು ಒದಗಿಸಿದ್ದಾರೆ. ಆದರೆ ಅಭಿವೃದ್ಧಿ ಸಹಿಸದ ಕೆಲವು ಸದಸ್ಯರು ತಮ್ಮ ವಾರ್ಡುಗಳಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ ಎಂದು ಧರಣಿ ಹೂಡಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಭಟನಾಕಾರರು ಇದೇ ಸಂಧರ್ಭದಲ್ಲಿ ದೂರಿದರು.
ಮನವಿ ಅರ್ಪಣೆ: 2018-19 ಸಾಲಿನ ಅನುದಾನದಲ್ಲಿ ಮುಂಜೂರಾಗಿ ಟೆಂಡರ್ ಆಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಪುರಸಭೆಯ ಬಿಜೆಪಿಯ ಸದಸ್ಯರು ಮತ್ತು ಸಾರ್ವಜನಿಕರು ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಈ ಸಂಧರ್ಭದಲ್ಲಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ವೀರಣ್ಣಾ ಹೊಸುರ, ರಾಮಣ್ಣಾ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಮುಖಂಡರಾದ ಆರ್.ಪಿ.ಸೋನವಾಲ್ಕರ, ನಿಂಗಪ್ಪ ಪಿರೋಜಿ, ಸಂತೋಷ ಸೋನವಾಲ್ಕರ, ಅಜೀಜ ಡಾಂಗೆ, ಅಪ್ಪಾಸಾಹೇಬ ಹೊಸಕೋಟಿ, ಬಸವಪ್ರಭು ನಿಡುಗುಂದಿ, ವಿಜಯ ಸೋನವಾಲ್ಕರ, ಜಯಾನಂದ ಪಾಟೀಲ, ಶ್ರೀಶೈಲ್ ಬಳಿಗಾರ, ನಿಂಗಪ್ಪ ಮುಗಳಖೋಡ, ಪ್ರಭು ಬಂಗೇನ್ನವರ, ಮರೇಪ್ಪ ಮರೆಪ್ಪಗೋಳ, ಮಲ್ಲಿಕ ಹುಣಶ್ಯಾಳ, ರಾಘವೇಂದ್ರ ಪಾಟೀಲ, ಅನ್ವರ ನದಾಫ್, ಹನಮಂತ ಸತರಡ್ಡಿ, ಪಾಂಡು ಮಹೇಂದ್ರಕರ, ಬಸವರಾಜ ಶೆಕ್ಕಿ, ಹನಮಂತ ಪೂಜೇರಿ, ಕೆ.ಬಿ.ಪಾಟೀಲ, ರಾಘು ಸವಳೇಕರ, ಪುರಸಭೆ ಸದಸ್ಯರಾದ ಖುರಶಾದ ನಧಾಪ್, ಸುಭಾಸ ಸಣ್ಣಕ್ಕಿ, ಮಲ್ಲವ್ವ ಝಂಢೇಕುರಬರ, ಮರೆಂಬಿ ಹೂಗಾರ, ಹುಸೇನಸಾಬ ಶೇಖ, ಅಬ್ದುಲಗಪಾರ ಡಾಂಗೆ, ಬೀಮವ್ವ ಪೂಜೇರಿ, ಗಂಗವ್ವ ಮುಗಳಖೋಡ, ಆನಂದ ಟಪಾಲ, ಯಲ್ಲವ್ವ ಹಳ್ಳೂರ ಮತ್ತಿತರರು ಭಾಗವಹಿಸಿದ್ದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ಪುರಸಭೆಯ ಕ್ರಿಯಾ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಯಥಾವತ್ತಾಗಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಪುರಸಭೆಯ ಬಿಜೆಪಿ ಸದಸ್ಯರು ಮತ್ತು ಸಾರ್ವಜನಿಕರು ಗುರುವಾರದಂದು ತಹಶೀಲ್ದಾರ ಅವರ ಮುಖಾಂತಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.