RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಅರಭಾವಿ ಮಂಡಲದಿಂದ ಈ ಬಾರಿಯೂ ಸದಸ್ಯತಾ ಅಭಿಯಾನದಲ್ಲಿ ದಾಖಲೆ ನೋಂದಣಿ : ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಅರಭಾವಿ ಮಂಡಲದಿಂದ ಈ ಬಾರಿಯೂ ಸದಸ್ಯತಾ ಅಭಿಯಾನದಲ್ಲಿ ದಾಖಲೆ ನೋಂದಣಿ : ಬಾಲಚಂದ್ರ ಜಾರಕಿಹೊಳಿ 

ಅರಭಾವಿ ಮಂಡಲದಿಂದ ಈ ಬಾರಿಯೂ ಸದಸ್ಯತಾ ಅಭಿಯಾನದಲ್ಲಿ ದಾಖಲೆ ನೋಂದಣಿ : ಬಾಲಚಂದ್ರ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 6 :

 

 

ದೇಶದೆಲ್ಲೆಡೆ ಕಮಲ ಅರಳಲು ಕಾರ್ಯಕರ್ತರ ತ್ಯಾಗ, ಪರಿಶ್ರಮ ಅಪಾರವಾಗಿದ್ದು, ಕಾರ್ಯಕರ್ತರೇ ಪಕ್ಷದ ಆಸ್ತಿಯಾಗಿದ್ದಾರೆ. ಬಿಜೆಪಿಯಿಂದ ಇಂದಿನಿಂದ ನಡೆಯುತ್ತಿರುವ ಸಂಘಟನಾ ಪರ್ವ ಸದಸ್ಯತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಬೇಕು. ಅರಭಾವಿ ಮತಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಹೊಸ ಸದಸ್ಯರನ್ನಾಗಿ ಮಾಡಲು ಕಾರ್ಯಕರ್ತರು ದುಡಿಯುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಶನಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅರಭಾವಿ ಮಂಡಲ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿ. ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ಅವರು ಹೇಳಿದರು.
ಕಳೆದ ವರ್ಷ ಅರಭಾವಿ ಕ್ಷೇತ್ರವೊಂದರಲ್ಲಿಯೇ ಬಿಜೆಪಿಯಿಂದ ಲಕ್ಷಕ್ಕೂ ಅಧಿಕ ಮತದಾರರನ್ನು ಸದಸ್ಯರನ್ನಾಗಿ ನೊಂದಣಿ ಮಾಡಲಾಗಿತ್ತು. ಇದು ರಾಜ್ಯದಲ್ಲಿಯೇ ದಾಖಲೆಯಾಗಿತ್ತು. ಈ ಬಾರಿಯೂ ನಮ್ಮ ಕ್ಷೇತ್ರದಿಂದ ಅತೀ ಹೆಚ್ಚಿನ ಹೊಸ ಸದಸ್ಯರನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕೆಂದು ಹೇಳಿದರು. ಜಗತ್ತಿನಲ್ಲಿಯೇ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರ ಸಾರಥ್ಯದಲ್ಲಿ ಬಿಜೆಪಿ ದೇಶದ ಎಲ್ಲ ಭಾಗಗಳನ್ನು ಆವರಿಸಿಕೊಂಡು ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.
ಶೇ 100 ರಷ್ಟು ನೀರಾವರಿ : ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ ಜೊತೆಗೆ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಶೇ 90 ರಷ್ಟು ಭೂ ಪ್ರದೇಶ ನೀರಾವರಿಯಾಗಿದ್ದು, ಮುಂದಿನ ದಿನಗಳಲ್ಲಿ ಟೇಲ್‍ಎಂಡ್ ಭಾಗಕ್ಕೂ ಸಹ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಶೇ 100 ರಷ್ಟು ನೀರಾವರಿ ಪ್ರದೇಶವನ್ನಾಗಿ ಮಾಡುವ ಭರವಸೆ ನೀಡಿದರು. ಇತ್ತೀಚೆಗೆ ಕೌಜಲಗಿ ಭಾಗದ ಕಲ್ಮಡ್ಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, 161.20 ಕೋಟಿ ರೂ.ಗಳ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ರಸ್ತೆ ಸುಧಾರಣೆಗೆ ಕ್ರಮ : ಕ್ಷೇತ್ರದ ಪ್ರಮುಖ ರಸ್ತೆಗಳ ನಿರ್ಮಾಣಕ್ಕೆ 40 ಕೋಟಿ ರೂ. ಅನುದಾನ ಬಂದಿದೆ. ಕುಲಗೋಡ-ಯಾದವಾಡ, ಲೋಳಸೂರ-ಹುಣಶ್ಯಾಳ ಪಿಜಿ ಸೇರಿದಂತೆ ಹದಗೆಟ್ಟ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದಿಂದ ಅನುದಾನ ವಿಳಂಬವಾಗುತ್ತಿರುವುದರಿಂದ, ಸ್ವತಃ ತಾವೇ ಈ ರಸ್ತೆಗಳ ನಿರ್ಮಾಣಕ್ಕೆ ಹಣಕಾಸಿನ ವ್ಯವಸ್ಥೆ ಮಾಡುತ್ತಿರುವುದಾಗಿ ಅವರು ಹೇಳಿದರು.
ನಾನು ದೇವರಲ್ಲ. ಆದರೆ ದೇವರ ಮಗ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿನ ಬಗ್ಗೆ ನಮ್ಮ ಕಾರ್ಯಕರ್ತರು ಅನುಮಾನಪಟ್ಟಿದ್ದರು. ಅಲ್ಲದೇ ಚರ್ಚೆಗಳು ಕೂಡಾ ಅಲ್ಲಲ್ಲಿ ನಡೆಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಕೆಲವು ಮುಖಂಡರಿಗೆ ನಾನೊಂದು ಮಾತು ಹೇಳಿದ್ದೆ. ಕೆಲವರು ನನಗೆ ಕೈಕೊಟ್ಟರೇ 50 ಸಾವಿರ. ಹಾಗೂ ಕೈಕೊಡದೇ ನನ್ನನ್ನು ಬೆಂಬಲಿಸಿದ್ದರೇ 80 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಆಯ್ಕೆಯಾಗುತ್ತೇನೆಂದು ವಿಶ್ವಾಸದಿಂದ ಹೇಳಿದ್ದೆ. ನನ್ನನ್ನು ಕೆಲ ವಿರೋಧಿಗಳು ಇವರೇನು ದೇವರೇ? ಎಂದು ಪ್ರಶ್ನಿಸಿದ್ದರು. ಆದರೆ ಆಗಲೇ ಅವರಿಗೆ ಪ್ರಚಾರ ವೇದಿಕೆಯಲ್ಲಿ ಉತ್ತರಿಸಿದ್ದೆ. ನಾನು ದೇವರಲ್ಲ. ನಾನೊಬ್ಬ ದೇವರ ಮಗ ಎಂದು ಹೇಳಿದ್ದನ್ನು ಸ್ಮರಿಸಿಕೊಂಡ ಅವರು, ಜನರ ಆಶೀರ್ವಾದದಿಂದಾಗಿ ಪ್ರಚಂಡ ಗೆಲುವು ಸಾಧಿಸಿ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದೆ. ಕಾರ್ಯಕರ್ತರು ಆತ್ಮವಿಶ್ವಾಸದಿಂದ ದುಡಿಯಬೇಕು. ಯಾವುದಕ್ಕೂ ಅಂಜಬಾರದು. ನಿಮ್ಮೊಂದಿಗೆ ಸದಾ ನಾನಿದ್ದೇನೆಂದು ಕಾರ್ಯಕರ್ತರಿಗೆ ಬಲ ತುಂಬಿದರು.
700 ಕ್ಯೂಸೆಕ್ಸ್ ನೀರು : ಜಿಆರ್‍ಬಿಸಿ ಕಾಲುವೆಗೆ ಹಿರಣ್ಯಕೇಸಿ ನದಿಯಿಂದ 700 ಕ್ಯೂಸೆಕ್ಸ್ ನೀರು ಹರಿದುಬರಲಿದೆ. ವಿದ್ಯುತ್ ಟ್ರಾನ್ಸ್ಪಾರ್ಮರ್ ಸುಟ್ಟಿದ್ದರಿಂದ ಸಮಸ್ಯೆ ಉದ್ಬವವಾಗಿದ್ದು, ಇನ್ನೆರಡು ದಿನಗಳಲ್ಲಿ ನೀರು ಹರಿಸಲಾಗುವುದು. ಬೆಟಗೇರಿ 2 ಕಾಲುವೆವರೆಗೆ ನೀರು ತಲುಪಲಿದೆ ಎಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನದ ಪ್ರಾಥಮಿಕ ಸದಸ್ಯತಾ ಕೋರಿಕೆಯ ಪತ್ರಗಳನ್ನು ಬಿಡುಗಡೆ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಸಿಗೆ ನೀರುಣಿಸುವ ಮೂಲಕ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿಗೆ ಸದಸ್ಯರಾಗುವವರು ತಮ್ಮ ಮೋಬೈಲ್‍ನಿಂದ 8980808080 ಈ ನಂಬರಗೆ ಶುಲ್ಕ ರಹಿತ ಕರೆ ಮಾಡಿ ಸದಸ್ಯರಾಗುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ(ನಾಗನೂರ), ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೂಳಪ್ಪ ಹೊಸಮನಿ, ರಾಜ್ಯ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ ಗೋವಿಂದ ಕೊಪ್ಪದ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ), ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯ ಬಡ್ನಿಂಗಗೋಳ, ಪ್ರಭಾಶುಗರ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಲ್.ಎನ್. ಬೂದಿಗೊಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ಗಿರಡ್ಡಿ, ಶಿದ್ಲಿಂಗ ಕಂಬಳಿ, ಮುಖಂಡರಾದ ಬಸವಂತ ಕಮತಿ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ಪರ್ವತಗೌಡ ಪಾಟೀಲ, ಮಹಾದೇವಪ್ಪ ಭೋವಿ, ಅಜೀಜ ಡಾಂಗೆ, ರಮೇಶ ಸಣ್ಣಕ್ಕಿ, ಲಕ್ಷ್ಮಣ ಗಣಪ್ಪಗೋಳ, ಶಿವನಗೌಡ ಪಾಟೀಲ, ವಿಠ್ಠಲ ಸವದತ್ತಿ, ಡಾ.ಎಸ್.ಎಸ್. ಪಾಟೀಲ, ರವಿ ಪರುಶೆಟ್ಟಿ, ಚುನಾಯಿತ ಪ್ರತಿನಿಧಿಗಳು, ಸಹಕಾರಿಗಳು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಸ್ವಾಗತಿಸಿದರು. ಬಸವರಾಜ ಮಾಳೇದವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಸಪ್ಪ ಬಬಲಿ ಕಾರ್ಯಕ್ರಮ ನಿರೂಪಿಸಿದರು.
ಬಾಲಚಂದ್ರ ಜಾರಕಿಹೊಳಿ, ಶಾಸಕರು : ರಾಜ್ಯದಲ್ಲಿಂದು ರಾಜಕೀಯ ಬೆಳವಣಿಗೆಗಳು ಬಿರುಸಿನಿಂದ ಸಾಗಿವೆ. 12ಕ್ಕೂ ಅಧಿಕ ಕಾಂಗ್ರೇಸ್-ಜೆಡಿಎಸ್ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆಂಬ ಮಾಹಿತಿ ಬಂದಿದೆ. ದೇವರ ದಯೆಯಿಂದ ರಾಜ್ಯದಲ್ಲಿ ಬಿಜೆಪಿ ಹೊಸ ಸರ್ಕಾರ ರಚನೆಯಾಗಲಿ. ಇದರಿಂದ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದ್ದರೇ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ರಚನೆಯಾಗಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಇರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಮೈತ್ರಿ ಸರ್ಕಾರದಲ್ಲಿ ಶಾಸಕರ ಭಿನ್ನಮತ ಸ್ಪೋಟಗೊಂಡಿದ್ದು, ಬಿಜೆಪಿಗೆ ವರದಾನವಾಗಿ ಪರಿಣಮಿಸಲಿದೆ.

Related posts: