ಗೋಕಾಕ:ಕಲಾವಿದರು ನಾಡಿನ ಆಸ್ತಿಯಾಗಿದ್ದು, ಅವರನ್ನು ಎಲ್ಲರೂ ಪ್ರೋತ್ಸಾಹಿಸಿ ಕಲೆಯನ್ನು ಉಳಿಸಿ ಬೆಳೆಸಬೇಕು : ಜಯಲಕ್ಷ್ಮೀ ಪಾಟೀಲ

ಕಲಾವಿದರು ನಾಡಿನ ಆಸ್ತಿಯಾಗಿದ್ದು, ಅವರನ್ನು ಎಲ್ಲರೂ ಪ್ರೋತ್ಸಾಹಿಸಿ ಕಲೆಯನ್ನು ಉಳಿಸಿ ಬೆಳೆಸಬೇಕು : ಜಯಲಕ್ಷ್ಮೀ ಪಾಟೀಲ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 16 :
ಕಲಾವಿದರು ನಾಡಿನ ಆಸ್ತಿಯಾಗಿದ್ದು, ಅವರನ್ನು ಎಲ್ಲರೂ ಪ್ರೋತ್ಸಾಹಿಸಿ ಕಲೆಯನ್ನು ಉಳಿಸಿ ಬೆಳೆಸುವಂತೆ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಜಯಲಕ್ಷ್ಮೀ ಪಾಟೀಲ ಹೇಳಿದರು.
ಅವರು, ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಜಿ ಕೆ ಕಾಡೇಶಕುಮಾರ ಅಭಿನಂದನಾ ಸಮಿತಿಯವರು ಆಯೋಜಿಸಿದ್ಧ ಏಳು ದಾಖಲೆ ಮಾಡಿದ ಕಲಾವಿದ ಜಿ ಕೆ ಕಾಡೇಶಕುಮಾರ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಕಾಡೇಶ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆಯನ್ನು ಉಳಿಸಿ ಬೆಳೆಸಿದಂತಾಗುತ್ತದೆ. ಕಲಾವಿದರು ನಾಡಿನ ಕೀರ್ತಿಯನ್ನು ಹೆಚ್ಚಿಸುತ್ತಾರೆ. ಕಲಾವಿದರ ತವರೂರಾದ ಗೋಕಾಕನಲ್ಲಿ ರಂಗ ಮಂದಿರ ನಿರ್ಮಿಸಿ ಕಲಾವಿದರನ್ನು ಬೆಳೆಸುವಂತೆ ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡುತ್ತ, ಕಲಾವಿದರು ಕಲೆಯಲ್ಲಿ ಶ್ರೀಮಂತರಾಗಿದ್ದರೂ ಆರ್ಥಿಕವಾಗಿ ಬಡವರಾಗಿರುತ್ತಾರೆ. ಅವರಿಗೆ ಪ್ರೋತ್ಸಾಹ ನೀಡಿದರೆ ಸಾಧಕರಾಗಿ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಾರೆ. ಸ್ಥಳೀಯ ಕಲಾವಿದ ಜಿ ಕೆ ಕಾಡೇಶ ಕಠಿಣ ಪರಿಶ್ರಮದಿಂದ ಬಹುಮುಖ ಕಲಾವಿದನಾಗಿ ಮೂಗಿನಿಂದ ಶಹನಾಯಿ, ಬಾಯಿಯಿಂದ ಸಾರಂಗ ನುಡಿಸಿ ಲಿಮ್ಕಾದಂತಹ ಹಲವಾರು ದಾಖಲೆ ಮಾಡಿದ್ದಾರೆ. ಇಂತಹ ಕಲಾವಿದನ ಅಭಿನಂದನಾ ಗ್ರಂಥ ಸಾರಸ್ವತಲೋಕಕ್ಕೆ ನೀಡಿದ ವಿಶಿಷ್ಟ ಕೊಡುಗೆ ಎಂದರು.
ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಚುನಮರಿ ವಹಿಸಿದ್ದರು.
ವೇದಿಕೆಯ ಮೇಲೆ ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ರೋಟರಿ ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೋಳ್ಳಿ, ವರ್ತಕ ಮಲ್ಲಿಕಾರ್ಜುನ ಈಟಿ, ವೈದ್ಯರುಗಳಾದ ಡಾ. ಅಮರ ಮುರಗೋಡ, ಡಾ. ಬಸವರಾಜ ಮದಬಾಂವಿ, ಡಾ. ಅಶೋಕ ಜಿರಗ್ಯಾಳ, ಕಲಾವಿದ ಜಿ ಕೆ ಕಾಡೇಶಕುಮಾರ, ಸವಿತಾ ಕಾಡೇಶಕುಮಾರ, ಗ್ರಂಥದ ಪ್ರಧಾನ ಸಂಪಾದಕ ಜಯಾನಂದ ಮಾದರ ಇದ್ದರು.
ಸಾಹಿತಿ ಲಕ್ಷ್ಮಣ ಚೌರಿ ಸ್ವಾಗತಿಸಿದರು, ಶೈಲಾ ಕೊಕ್ಕರಿ ಹಾಗೂ ಚೇತನ ಜೋಗನ್ನವರ ನಿರೂಪಿಸಿದರು, ರಾಮಚಂದ್ರ ಕಾಕಡೆ ವಂದಿಸಿದರು.