ಘಟಪ್ರಭಾ:ಶಿಕ್ಷಕ ಕೋಳಿ ಇವರಿಗೆ ಪ್ರೊ.ಶಿ.ಶಿ.ಬಸವನಾಳ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ
ಶಿಕ್ಷಕ ಕೋಳಿ ಇವರಿಗೆ ಪ್ರೊ.ಶಿ.ಶಿ.ಬಸವನಾಳ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಪೆ 28 :
ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುನಾಥ ಕೋಳಿ ಇವರಿಗೆ ಪ್ರೊ.ಶಿ.ಶಿ.ಬಸವನಾಳ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ ಲಭಿಸಿದೆ.
ಇತ್ತೀಚಿಗೆ ಧಾರವಾಡದಲ್ಲಿ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ, ಬೆಲ್ಲದ ಶಿಕ್ಷಣ ಮತ್ತು ಕೃಷಿ ಪ್ರತಿಷ್ಠಾನ ಹಾಗೂ ಅಪರ ಆಯುಕ್ತರ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಸಮಾರಂಭದಲ್ಲಿ ಪ್ರೊ. ಶಿ.ಶಿ. ಬಸವನಾಳ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯಾ ಹಿರೇಮಠ ಇವರು ಕೋಳಿಯವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಲ್ಲದ ಪ್ರತಿಷ್ಠಾನದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ನಿರ್ದೇಶಕರಾದ ಡಾ.ಬಿ.ಕೆ.ಎಸ್.ವರ್ಧನ, ಉಪ ನಿರ್ದೇಶಕರಾದ ಎಂ.ಎಫ್.ಕುಂದಗೋಳ, ಎಸ್.ಬಿ.ಕೊಡ್ಲಿ ಸೇರಿದಂತೆ ಅನೇಕ ಗಣ್ಯರು ಇದ್ದರು.
ಪ್ರಶಸ್ತಿಯನ್ನು ಪಡೆದ ಮುಖ್ಯೋಪಾಧ್ಯಾಯರನ್ನು ಶಾಲೆಯ ಎಸ್.ಡಿ.ಎಂ.ಸಿ ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.