ಗೋಕಾಕ:ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಿ : ಜೆ.ಎಂ.ನದಾಫ್
ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಿ : ಜೆ.ಎಂ.ನದಾಫ್
ಬೆಟಗೇರಿ ನ 23 : ಗ್ರಾಮದಲ್ಲಿರುವ 18 ವರ್ಷ ವಯಸ್ಸು ತುಂಬಿದ ಯುವಕ-ಯುವತಿಯರು ತಪ್ಪದೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು ಎಂದು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ್ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ ಮತ್ತು ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದೊಂದಿಗೆ ಶುಕ್ರವಾರ ನ.23 ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಕುರಿತು ವಿಶೇಷ ನೊಂದಣಿ ಕಾರ್ಯಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2018 ಡಿಸೆಂಬರ31ರೊಳಗೆ 18 ವರ್ಷ ಪೂರೈಸುವ ಗ್ರಾಮದ ಎಲ್ಲ ಯುವಕ-ಯುವತಿಯರು ಸಹ ಮತದಾರರ ಯಾದಿಯಲ್ಲಿ ತಮ್ಮ ಹೆಸರು ನೊಂದಾಯಿಸಬೇಕು. ಈಗಾಗಲೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ, ವರ್ಗಾವಣೆ ಮತ್ತು ಲೋಪದೋಷಗಳಿದ್ದರೆ, ಸೂಕ್ತ ದಾಖಲೆಗಳನ್ನು ಸ್ಥಳೀಯ ಬಿಎಲ್‍ಒಗೆ ಕೊಟ್ಟು ಇದೇ ನ. 23, 24 ಮತ್ತು 25 ತನಕ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳುವ ಅವಕಾಶವಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಜೆ.ಎಂ.ನದಾಫ್ ತಿಳಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತದಾರರ ನೊಂದಣಿ ಕುರಿತು ಹಲವಾರು ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯ ಉಭಯ ಶಾಲಾ ಮಕ್ಕಳಿಂದ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ ಜಾಥಾ ನಡೆದ ಬಳಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಗ್ರಾಪಂ ಸದಸ್ಯ ಸುಭಾಷ ಕರೆಣ್ಣವರ, ಮಲ್ಲಪ್ಪ ಪಣದಿ, ರುದ್ರಪ್ಪ ಮುಧೋಳ, ಶಾಲೆಯ ಮುಖ್ಯ ಶಿಕ್ಷಕ ವೈ.ಸಿ. ಶೀಗಿಹಳ್ಳಿ, ಆರ್.ಬಿ.ಬೆಟಗೇರಿ, ಸಿದ್ದಣ್ಣ ಸನದಿ, ರುದ್ರಪ್ಪ ಶ್ಯಾಸಪ್ಪ ಕಾಡವ್ವಗೋಳ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಮಕ್ಕಳು, ಇತರರು ಇದ್ದರು.