ಗೋಕಾಕ:ಸಡಗರ ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ
ಸಡಗರ ಸಂಭ್ರಮದಿಂದ ಶೀಗಿಹುಣ್ಣಿಮೆ ಆಚರಣೆ
ಬೆಟಗೇರಿ ಅ 24 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬುಧವಾರ ಅ.24 ರಂದು ಶೀಗಿಹುಣ್ಣಿಮೆ ಪ್ರಯುಕ್ತ ರೈತರು ತಮ್ಮ ತಮ್ಮ ಹೊಲ-ಗದ್ದೆಗಳಲ್ಲಿರುವ ಹಚ್ಚ ಹಸಿರಿನ ಬೆಳೆಗಳ ನಡುವೆ ಭೂಮಿತಾಯಿಗೆ ಉಡಿತುಂಬಿ, ಪೂಜಿಸಿ, ಚರಗ ಚಲ್ಲುವ ಕಾರ್ಯಕ್ರಮ ಸಡಗರದಿಂದ ನಡೆಯಿತು.
ಗ್ರಾಮದ ಎಲ್ಲರ ಮನೆಗಳಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿತ್ತು, ಅಂದು ಇಲ್ಲಿಯ ರೈತ ಕುಟುಂಬದ ಎಲ್ಲರೂ ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಹೋಗಲು ಎತ್ತುಗಳನ್ನು ಶೃಂಗರಿಸಿ, ಎತ್ತಿನ ಬಂಡಿ ಹೂಡಿಕೊಂಡು ಹೊಲ-ಗದ್ದೆಗಳಿಗೆ ಹೋದರೇ, ಇನ್ನೂ ಕೆಲವರು ಸಮೀಪದ ಹೊಲ-ಗದ್ದೆಗಳಿಗೆ ಕಾಲ್ನಡೆಗೆಯಲ್ಲಿ, ದ್ವಿಚಕ್ರ ವಾಹನಗಳಲ್ಲಿ ಹೋಗಿ ಶೀಗಿ ಹುಣ್ಣಿಮೆ ಹಬ್ಬ ಆಚರಿಸಿದರು.
ಹೊಲ-ಗದ್ದೆಗಳಲ್ಲಿ ಮನೆಯಿಂದ ಒಯ್ದ ಅಡುಗೆ ಬಿಚ್ಚಿಟ್ಟು ಹೊಲದಲ್ಲಿರುವ ಐದು ಜೋಳದ ದಂಟು, ಚಿಕ್ಕ ಐದು (ಪಂಚ ಪಾಂಡವರು) ಕಲ್ಲುಗಳನ್ನು ಹುಡುಕಿ ತಂದು ಪೂಜಿಸಿ, ನೈವೇದ್ಯ ಅರ್ಪಿಸಿದ ಬಳಿಕ ಹೊಲದ ತುಂಬೆಲ್ಲ ನೈವೇದ್ಯ ರೂಪದಲ್ಲಿರುವ ಮೃಷ್ಟಾನ್ನ ಎಡೆಯನ್ನು ಚರಗ ಚಲ್ಲಿ, ಮನೆಮಂದಿ ಹಾಗೂ ಅಕ್ಕ-ಪಕ್ಕದ ಮನೆಯವರು ಅಷ್ಟೇ ಅಲ್ಲದೇ ಅಪರಿಚಿತ ಜನರು ಸಹ ಸೇರಿಕೊಂಡು ಒಂದೆ ಸ್ಥಳದಲ್ಲಿ ಕುಳಿತು ಭೋಜನ ಸವಿದು ಸಂಭ್ರಮಿಸಿದರು. ಮುಂಜಾನೆಯಿಂದ ಸಂಜೆ ತನಕ ಎಲ್ಲರೂ ಹೊಲ, ಗದ್ದೆಗಳಲ್ಲಿರುವದರಿಂದ ಗ್ರಾಮದ ಮನೆ, ಓಣಿಗಳಲ್ಲಿ ಜನರ ಓಡಾಟ ಇಲ್ಲದಂತಾಗಿತ್ತು. ಮಳೆ, ಬೆಳೆ ಕುರಿತು ಚರ್ಚಿಸುತ್ತಾ ಸಾಯಂಕಾಲತಮ್ಮ ಮನೆಗಳತ್ತ ಮರಳಿದರು.
“ಉತ್ತರಕರ್ನಾಟಕ ಭಾಗದಲ್ಲಿ ಪ್ರತಿ ವರ್ಷ ಎಳ್ಳಾಮವಾಸ್ಯೆ ಮತ್ತು ಶೀಗಿಹುಣ್ಣಿಮೆ ಬಂದರೆ ಸಾಕು ರೈತರ ಮನೆಗಳಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ, ಸಂಭ್ರಮ ತುಂಬಿ ತುಳಕುತ್ತಿರುತ್ತದೆ. ಭೂತಾಯಿಗೆ ಪೊಜೆ, ಪುನಸ್ಕಾರ, ನೈವೇದ್ಯ ಅರ್ಪಿಸುವ, ಸಾಮೂಹಿಕವಾಗಿ ಎಲ್ಲರೂ ಕುಳಿತು ಊಟ ಮಾಡುವ ಸುದಿನವಾಗಿದೆ. * ಲಕ್ಷ್ಮಣ ನೀಲಣ್ಣವರ. ಗ್ರಾಮದ ಪ್ರತಿಪರ ರೈತ.