ಗೋಕಾಕ:ಬಸವರಾಜ ಹೊರಟ್ಟಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಜೂ 23 ಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ : ಎಸ್.ಎಸ್ ಅಂಗಡಿ

ಬಸವರಾಜ ಹೊರಟ್ಟಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಜೂ 23 ಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ : ಎಸ್.ಎಸ್ ಅಂಗಡಿ
ಗೋಕಾಕ ಜೂ 20 : ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಕಡೆಗಣಿಸಿರುವುದನ್ನು ಖಂಡಿಸಿ ಜೂ 23 ರಂದು ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎಸ್ ಅಂಗಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಸತತ 7ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರು ಶಿಕ್ಷಣ, ಗ್ರಾಮೀಣಾಭಿವೃದ್ದಿ, ಕಾನೂನು ಸಂಸದಿಯ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಸಾಕಷ್ಟು ಅಭಿವೃದ್ದಿ ಪರ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೊರಟ್ಟಿ ಅವರನ್ನು ಸಚಿವ ಸಂಪುಟದಿಂದ ಕಡೆಗಣಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
4 ದಶಕಗಳಿಂದ ವಿಧಾನ ಪರಿಷತ್‍ನಲ್ಲಿ ಶಿಕ್ಷಕರ, ರೈತರ ಪರ ಹೋರಾಟ, ಸಮಾಜಮುಖಿ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ಮೂಲಕ ರಾಜ್ಯದ ಅಭಿವೃದ್ದಿಗೆ ತಮ್ಮದೆಯಾದ ಕೊಡುಗೆಗಳನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಸರ್ಕಾರದ ಗನಬ ಸೆಳೆಯಲು ಜೂ. 23 ರಂದು ಹುಬ್ಬಳ್ಳಿಯಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಜಿಲ್ಲೆಯ ಮಾಧ್ಯಮಿಕ ಶಾಲಾ ನೌಕರ ಸಂಘ, ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿ ಒಕ್ಕೂಟ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪ್ರೌಢ ಶಾಲಾ ಮಂಡಳಿಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಹೊರಟ್ಟಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅಂಗಡಿ ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.