ಗೋಕಾಕ:ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ

ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ
ಗೋಕಾಕ ಜೂ, 5 ;- ರಾಜ್ಯದ ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ವು ರಾಜ್ಯಾದ್ಯಂತ ನೀಡಿರುವ ಕರೆಯ ಹಿನ್ನೆಲೆಯಲ್ಲಿ ಇಲ್ಲಿಯ ಎಬಿವಿಪಿ ಸಂಘಟನೆಯು ಬುಧವಾರದಂದು ಮುಂಜಾನೆ ನಗರದ ಬಸವೇಶ್ವರ ವೃತ್ತದಲ್ಲಿ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಕೂಡಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗ ಸಂಚಾಲಕ ಶಿವಾನಂದ ಸೈದಾಪೂರ ಅವರು ಮಾತನಾಡಿ, ಹಿಂದಿನ ರಾಜ್ಯ ಸರ್ಕಾರವು ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿರುವುದರಿಂದ ಲಕ್ಷಾಂತರ ವಿದ್ಯಾಥಿಗಳಿಗೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅನುಕೂಲಕರವಾಗಿದೆ. ಆದರೆ ಇಂದಿನ ರಾಜ್ಯ ಸರ್ಕಾರ ತಮ್ಮ ಪ್ರನಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವುದಾಗಿ ಹೇಳಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಂದಿನ ಖಾಸಗೀ ಕಾಲೇಜುಗಳ ಡೊನೇಷನ್ ಹಾವಳಿ ಮತ್ತು ಶಿಕ್ಷಣವು ಮಾರಾಟದ ವಸ್ತುವಾಗಿರುವಂತಹ ಈ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ ಸರ್ಕಾರವು ಎಲ್ಲ ಬಡ, ಪ್ರತಿಭಾವಂತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೋಕಾಕ ತಾಲೂಕಾ ಸಂಚಾಲಕ ವಿಷ್ಣುಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಿಂದ ಬಸ್ ಪಾಸ್ ಹೊಂದಿದ ವಿದ್ಯಾರ್ಥಿಗಳು ನಗರ ಸಾರಿಗೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು ಹಾಗೂ ರಾಜ್ಯದಲ್ಲಿ ಕೆಲವೊಂದು ಗ್ರಾಮೀಣ ಭಾಗಗಳು ಬಸ್ ವ್ಯವಸ್ಥೆಯಿಂದ ವಂಚಿತವಾಗಿದ್ದು, ಅಂತಹ ಪ್ರದೇಶಗಳಿಗೆ ಸರ್ಕಾರವು ಬಸ್‍ಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಸರ್ಕಾರವು ಕೂಡಲೇ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಾನಂದ ಬಬಲಿ, ಚೇತನ ಖಡಕಬಾಂವಿ, ಅರ್ಜುನ ಕೌಜಲಗಿ, ಮನಿಕಂಠ ವಾಲಿಕಾರ, ಮಲೀಕಜಾನ ನದಾಫ್, ಸದಾಶಿವ ಕದಮ, ಪ್ರವೀಣ ಶಿಂತ್ರೆ, ಹಾಲಚಂದ್ರ ಮಿಡಕನಟ್ಟಿ, ಪೂಜಾ ಬಿಲಕುಂದಿ, ರೂಪಾ ಪಾಟೀಲ, ಸಂಗೀತಾ ಮಾಗನೂರ, ಲಕ್ಷ್ಮೀ ಗೌರೋಜಿ, ಯಶೋಧಾ ಕೋಳಿ, ಪದ್ಮಾವತಿ ಉಳ್ಳಾಗಡ್ಡಿ ಸೇರಿದಂತೆ ನಗರದ ಎಲ್ಲ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.