RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೋಳ್ಳಿ : ಶಾಸಕ ಬಾಲಚಂದ್ರ

ಗೋಕಾಕ:ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೋಳ್ಳಿ : ಶಾಸಕ ಬಾಲಚಂದ್ರ 

ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೋಳ್ಳಿ : ಶಾಸಕ ಬಾಲಚಂದ್ರ

ಗೋಕಾಕ ಫೆ 13 :- ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಎರಡು ಮಹತ್ವಾಕಾಂಕ್ಷೆಯ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಪಿಎಂಜೆಜೆಬಿವಾಯ್ ಹಾಗೂ ಪಿಎಂಎಸ್‍ಬಿವಾಯ್ ಇವುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದರು.
ಸಮೀಪದ ನಲ್ಲಾನಟ್ಟಿ ಗ್ರಾಮದಲ್ಲಿ ಭಾರತೀಯ ಅಂಚೆ ಇಲಾಖೆ ಗೋಕಾಕ ವಿಭಾಗ ಸೋಮವಾರದಂದು ನಲ್ಲಾನಟ್ಟಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಲ್ಲಾನಟ್ಟಿ ಗ್ರಾಮವನ್ನು ಅಂಚೆ ಇಲಾಖೆಯು ಸಂಪೂರ್ಣ ಸುಕನ್ಯಾ ಸಮೃದ್ಧಿ, ಸಂಪೂರ್ಣ ಉಳಿತಾಯ ಖಾತೆ, ಸಂಪೂರ್ಣ ಪ್ರಧಾನಮಂತ್ರಿ ಸುರಕ್ಷಾ ವಿಮಾ ಗ್ರಾಮವನ್ನಾಗಿ ಘೋಷಿಸಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಿದರು.

ನಲ್ಲಾನಟ್ಟಿ ಗ್ರಾಮದಲ್ಲಿ ಗೋಕಾಕ ವಿಭಾಗದ ಅಂಚೆ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ವಲಯದ ಪಿಎಂಜಿ ವೀಣಾ ಶ್ರೀನಿವಾಸ ಅವರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಒಂದಾಗಿದ್ದು, ನಿವೃತ್ತಿ ಯೋಜನೆಯಡಿ ಹೆಚ್ಚೆಚ್ಚು ಜನರು ಒಳಗೊಳ್ಳುವಂತೆ ಮಾಡಿ ನಿವೃತ್ತಿ ಭದ್ರತೆಯನ್ನು ಒದಗಿಸುವುದು ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿರಿಸಿಕೊಂಡು ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ನಲ್ಲಾನಟ್ಟಿ ಗ್ರಾಮ ಸಂಪೂರ್ಣ ವಿಮಾ ಗ್ರಾಮವಾಗಿ ಪರಿವರ್ತನೆಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಅಂಚೆ ಇಲಾಖೆಯ ಯೋಜನೆಗಳನ್ನು ಸಾರ್ವಜನಿಕರು ಪಡೆಯಬೇಕು. ದೇಶದಲ್ಲಿಯೇ ಎಲ್ಲ ನಾಗರೀಕರ ವಿಶ್ವಾಸಾರ್ಹತೆ ಗಳಿಸಿರುವ ಹೆಮ್ಮೆಯ ಇಲಾಖೆಯಾಗಿದೆ ಎಂದರು.

1.31 ಕೋಟಿ ರೂ. ವೆಚ್ಚದ ಅಭಿವೃದ್ಧಿಗೆ ಚಾಲನೆ :- ಕೋಟಿ ರೂ. ವೆಚ್ಚದ ನರೇಗಾ ಯೋಜನೆಯಡಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣ, 4 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯಗಳ ನಿರ್ಮಾಣ, 18 ಲಕ್ಷ ರೂ. ವೆಚ್ಚದ ಪಿಎಂಜಿಎಸ್‍ವಾಯ್ ಯೋಜನೆಯಡಿ ಸಿ.ಸಿ ರಸ್ತೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ 9 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ನಂತರ 141 ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರಗಳನ್ನು ವಿತರಿಸಿದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ್ ಮಾತನಾಡಿ, ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮವನ್ನು ಸಂಪೂರ್ಣ ಸುರಕ್ಷಾ ವಿಮಾ ಗ್ರಾಮವನ್ನಾಗಿ ಆಯ್ಕೆ ಮಾಡಲಾಗಿದೆ. ಅತ್ಯುನ್ನತ ಸುರಕ್ಷತೆ ಹಾಗೂ ಭದ್ರತೆಯೊಂದಿಗೆ ಅಂಚೆ ಕಛೇರಿ ಖಾತೆಗಳನ್ನು ನಿರ್ವಹಿಸುತ್ತಿರುವ ಅಂಚೆ ಕಛೇರಿಗಳಲ್ಲಿನ ಯೋಜನೆಗಳ ಮೇಲೆ ತೆರಿಗೆ ವಿನಾಯಿತಿ ಇದೆ. ಅಟಲ್ ಪಿಂಚಣಿ ಯೋಜನೆ, ಎಪಿವಾಯ್, ಎನ್‍ಎಸ್‍ಎ ಯೋಜನೆಗಳನ್ನು ಗ್ರಾಹಕರು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಹಿರಿಯ ನಾಗರೀಕರಿಗಾಗಿ ಉಳಿತಾಯ ಯೋಜನೆ, ಪಿಪಿಎಫ್ ಯೋಜನೆಯಲ್ಲಿ ಎಲ್ಲ ವರ್ಗದವರು ದೀರ್ಘಾವಧಿ ಹೂಡಿಕೆಗಾಗಿ ಅನುಕೂಲಕರ ಯೋಜನೆ ಜಾರಿ ಮಾಡಲಾಗಿದೆ ಎಂದು ಇಲಾಖೆಯ ಯೋಜನೆಗಳನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ಗೋಕಾಕ ಅಂಚೆ ವಿಭಾಗದ ಅಧೀಕ್ಷಕ ಎಮ್. ಶಿವರಾಜ್ ವಹಿಸಿದ್ದರು.
ಜಿಪಂ ಸದಸ್ಯೆ ಬಸವ್ವಾ ಕುಳ್ಳೂರ, ಗ್ರಾಪಂ ಅಧ್ಯಕ್ಷೆ ಲಕ್ಕವ್ವಾ ಕುಳ್ಳೂರ, ಹಿರಿಯ ಮುಖಂಡ ಕಾಮಪ್ಪ ಕುಳ್ಳೂರ, ತಾಪಂ ಮಾಜಿ ಸದಸ್ಯರಾದ ವೆಂಕಪ್ಪ ಅರಭಾವಿ, ವಿಷ್ಣು ಕುಳ್ಳೂರ, ಗ್ರಾಪಂ ಉಪಾಧ್ಯಕ್ಷ ಅಡಿವೆಪ್ಪ ಎಂಟೆತ್ತಿನವರ, ಶಂಕರ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವಂತ ಕುಳ್ಳೂರ, ಬಸಪ್ಪ ಕುಳ್ಳೂರ(ಕುರಿ), ತಮ್ಮಣ್ಣಾ ವಾಲೀಕಾರ, ಪರಸಪ್ಪ ಮೇಲ್ಮಟ್ಟಿ, ಅಂಚೆ ಇಲಾಖೆಯ ಆರ್.ವ್ಹಿ.ಮಡಿವಾಳರ, ಎಸ್.ಎ. ಸಾರಾಪೂರ, ಆರ್.ಡಿ ದುರ್ಗಾಯಿ, ಬಿ.ಡಿ. ಚಿಪ್ಪಲಕಟ್ಟಿ, ಲೋಹಿತ ಭಜಂತ್ರಿ, ಮುಖಂಡರಾದ ಹಣಮಂತ ಸಾಗರ, ಬಾಲಪ್ಪ ಹುಕ್ಕೇರಿ, ಸಿದ್ರಾಮ ಕುಳ್ಳೂರ, ಹಣಮಂತ ಪಾಟೀಲ ಉಪಸ್ಥಿತರಿದ್ದರು.
ಉತ್ತರ ಕರ್ನಾಟಕ ವಲಯದ ಪಿ.ಎಂ.ಜಿ ವೀಣಾ ಶ್ರೀನಿವಾಸ ಅವರು ಮೈ ಸ್ಟಾಂಪ್ ಯೋಜನೆಯಡಿ ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.

Related posts: