ಗೋಕಾಕ:ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆಯಿಂದ ಬಡ ಕುಟುಂಬಗಳನ್ನು ಗುರುತಿಸಿ : ಮಾಜಿ ಸಚಿವ ಬಾಲಚಂದ್ರ
ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆಯಿಂದ ಬಡ ಕುಟುಂಬಗಳನ್ನು ಗುರುತಿಸಿ : ಮಾಜಿ ಸಚಿವ ಬಾಲಚಂದ್ರ
ಗೋಕಾಕ ಡಿ 22 : ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆಯಿಂದ ಬಡ ಕುಟುಂಬಗಳನ್ನು ಗುರುತಿಸಬೇಕು. ಮನೆಗಳ ಹಂಚಿಕೆ ವಿಚಾರದಲ್ಲಿಯೂ ಅರ್ಹ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ಯಾರೊಬ್ಬರಿಂದಲೂ ದುಡ್ಡು ಪಡೆಯಬೇಡಿ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಪಂ ಸದಸ್ಯರಿಗೆ ತಾಕೀತು ಮಾಡಿದರು.
ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಶುಕ್ರವಾರದಂದು ನರೇಗಾ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಗ್ರಾಮ ಪಂಚಾಯತ ನೂತನ ಕಟ್ಟಡ ಹಾಗೂ 11 ಲಕ್ಷ ರೂ. ವೆಚ್ಚದ ಉಗ್ರಾಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮನೆಗಳನ್ನು ವಿತರಿಸುವಾಗ ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಫಲಾನುಭವಿಗಳು ಸಹ ಮನೆಗಳಿಗಾಗಿ ಯಾರಿಗೂ ದುಡ್ಡು ಕೊಡಬೇಡಿ ಎಂದು ಹೇಳಿದರು.
ಗ್ರಾಮಾಭಿವೃದ್ಧಿಯಾಗಬೇಕಾದರೆ ಎಲ್ಲರೂ ಮುಕ್ತ ಮನಸ್ಸಿನಿಂದ ಒಂದಾಗಿ-ಒಗ್ಗಟ್ಟಾಗಬೇಕು. ಅಂದಾಗ ಮಾತ್ರ ಗ್ರಾಮಗಳು ಸುಧಾರಣೆಯಾಗುತ್ತವೆ. ಸಮಾಜ ತಪ್ಪು ದಾರಿಗೆ ನಡೆದಾಗ ಅದನ್ನು ಯುವ ಜನಾಂಗ ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ಯುವಕರಿಂದ ಈ ದೇಶದ ಭವಿಷ್ಯ ನಿಂತಿದೆ. ಹಿರಿಯರ ಮಾರ್ಗದರ್ಶನ ಪಡೆದು ಗ್ರಾಮಾಭಿವೃದ್ಧಿಗೆ ದುಡಿಯುವ ಮನೋಭಾವನೆ ಬೆಳೆಸಿಕೊಳ್ಳುವಂತೆ ಯುವಕರಿಗೆ ಸಲಹೆ ಮಾಡಿದರು. ಗೋಸಬಾಳದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಾ ನಿವಾಸ ನಿರ್ಮಿಸಿಕೊಡಲಾಗುವುದು. ಎರಡು ತಿಂಗಳೊಳಗೆ ಕೃಷಿಕರ ಜಮೀನುಗಳ ರಸ್ತೆಗಳನ್ನು ದುರಸ್ತಿಪಡಿಸುವ ವಾಗ್ದಾನ ಮಾಡಿದರು.
ಗೋಸಬಾಳ ಗ್ರಾಮ ಪಂಚಾಯತಿ ಹೊಸ ಕಟ್ಟಡಕ್ಕೆ ನರೇಗಾ ಯೋಜನೆಯಡಿ 25 ಲಕ್ಷ ರೂ. ಅನುದಾನ ತೆಗೆದಿರಿಸಲಾಗಿದ್ದು, ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದರು.
ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಸದಸ್ಯೆ ನೀಲವ್ವಾ ಬಳಿಗಾರ, ಗ್ರಾಪಂ ಅಧ್ಯಕ್ಷ ಶಿವಲಿಂಗ ಬಳಿಗಾರ, ಜಿಪಂ ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಗೋಸಬಾಳ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಯ್ಯಾ ಮಠದ, ಸುಭಾಸ ಹಾವಾಡಿ, ಬಸನಗೌಡ ಪಾಟೀಲ, ಮುಖಂಡರಾದ ಗೌಡಪ್ಪ ಪಾಟೀಲ, ಸತ್ತೆಪ್ಪ ಹೊಸಟ್ಟಿ, ಬಸಪ್ಪ ಕಪರಟ್ಟಿ, ಬಸು ಇಟ್ನಾಳ, ಅರ್ಜುನ ಬಂಗಾರಿ, ಬಾಳಪ್ಪ ಬುಳ್ಳಿ, ಸಿದ್ಧಾರೂಢ ಮೆಳ್ಳಿಕೇರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನ್ನವರ, ಪಿಡಿಓ ಯಲ್ಲಪ್ಪ ಹೊಸಮನಿ, ಮುಂತಾದವರು ಉಪಸ್ಥಿತರಿದ್ದರು.