RNI NO. KARKAN/2006/27779|Wednesday, March 11, 2026
You are here: Home » breaking news » ಗೋಕಾಕ:ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ

ಗೋಕಾಕ:ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ 

ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲಾ ಕೇಂದ್ರವನ್ನಾಗಿ ಮಾಡಿ : ಅಶೋಕ ಪೂಜಾರಿ ಆಗ್ರಹ
ಗೋಕಾಕ ಮಾ 11 : ಜನಗಣತಿ ನಡೆಯುವ ಸಮಯದಲ್ಲಿ ಗಡಿ ವಿಭಜನೆ ಆಗೋದಿಲ್ಲ ಎಂದು ನಾವು ಭಾವಿಸಿದ್ದು, ಆದರೆ ಮಾನ್ಯ ಉಪಮುಖ್ಯಮಂತ್ರಿಗಳು ಜಿಲ್ಲಾ ಮಂತ್ರಿಗಳ ಸಮ್ಮುಖದಲ್ಲಿ ಚಿಕ್ಕೋಡಿ ಜಿಲ್ಲಾ ರಚನೆ ಪರಿಶೀಲನೆ ಹಂತದಲ್ಲಿ ಇದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ , ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದಾದರೆ ಮೊದಲು ಗೋಕಾಕ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಸರಕಾರವನ್ನು ಆಗ್ರಹಿಸಿದರು.

ಬುಧವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜನೆವರಿ ತಿಂಗಳಿನಿಂದ ಜನಗಣತಿ ಮಾಡುವುದಾಗಿ ಕೇಂದ್ರ ಸರಕಾರ ಹೇಳಿತ್ತು ಆದರೆ ಮೂರು ತಿಂಗಳು ಕಳೆದರು ಇನ್ನು ಗಣತಿ ಕಾರ್ಯ ಆರಂಭವಾಗಿಲ್ಲ ಹಾಗಾಗಿ ಆದಷ್ಟು ಬೇಗ ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ನೂತನ ಜಿಲ್ಲೆ ಮಾಡಲು ಸರಕಾರ ಮನಸ್ಸು ಮಾಡಬೇಕು .ಅಥಣಿ, ಬೈಲಹೊಂಗಲ ಮತ್ತು ಚಿಕ್ಕೋಡಿ ಜಿಲ್ಲಾ ಬೇಡಿಕೆಗೆ ನಮ್ಮ ವಿರೋಧ ವಿಲ್ಲ. ಗೋಕಾಕ ಜಿಲ್ಲಾ ಹೋರಾಟ ಇಂದು ನಿನ್ನೆಯದಲ್ಲ ಬ್ರಿಟಿಷರ ಕಾಲದಿಂದಲೂ ಗೋಕಾಕ ಜಿಲ್ಲೆ ಆಗಬೇಕು ಎಂಬ ಕೂಗು ಇದೆ ಆದರೆ ತಂಪು ವಾತಾವರಣದ ನೆಪ್ಪ ಮಾಡಿ ಗೋಕಾಕ ಬಿಟ್ಟು ಬೆಳಗಾವಿಯನ್ನು ಆ ಸಂದರ್ಭದಲ್ಲಿ ಜಿಲ್ಲೆ ಎಂದು ಘೋಷಿಸಲಾಯಿತು. ಮುಂದೆ ಗೋಕಾಕ ಜಿಲ್ಲಾ ವಿಷಯ ಕಾರಣಾಂತರಗಳಿಂದ ಹಿಂದುಳಿದು ಬಿಟ್ಟಿದೆ. ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಅವರು ಗಟ್ಟಿ ಮನಸ್ಸು ಮಾಡಿ ಅವರ ಕಾಲಘಟ್ಟದಲ್ಲಿ ಗೋಕಾಕ ಜಿಲ್ಲೆ ಎಂದು ಘೋಷಿಸಿದರು. ಆದರೆ ಕೆಲವರ ಒತ್ತಡದಿಂದ ಗೆಜೆಟ್ ಹಿಂಪಡೆಯಲಾಯಿತು. ಈಗ ಮತ್ತೆ ಬೆಳಗಾವಿ ಜಿಲ್ಲಾ ವಿಭಜನೆ ವಿಷಯ ಮುನ್ನಲೆಗೆ ಬಂದಿದೆ. ಒಂದು ವೇಳೆ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ ಹೊಸ ಜಿಲ್ಲೆ ಮಾಡುವುದಾದರೆ ಮೊದಲು ಗೋಕಾಕ ಜಿಲ್ಲೆ ಮಾಡಬೇಕು ಇಲ್ಲದಿದ್ದರೆ ಗೋಕಾಕ ಜಿಲ್ಲಾ ಹೋರಾಟ ಉಗ್ರ ಸ್ವರೂಪ ತಾಳುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ ಅವರು ಜಿಲ್ಲೆಯ ಇಬ್ಬರೂ ಮಂತ್ರಿಗಳು ಸರಕಾರದ ಮೇಲೆ ನಿರಂತರ ಒತ್ತಡ ಹಾಕಿ ಗೋಕಾಕ ಜಿಲ್ಲೆ ಮಾಡಲು ಗಟ್ಟಿ ಮನಸ್ಸು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರೋ.ಅರ್ಜುನ ಪಂಗಣ್ಣನವರ, ಸಂಗೀತಾ ಕಾಂಬಳೆ, ಶಬ್ಬೀರ ಮುಜಾವರ, ಡಾ.ಪ್ರವೀಣ ನಾಯಿಕ, ಮಲ್ಲಪ್ಪ ಜಟ್ಟೆನ್ನವರ ಉಪಸ್ಥಿತರಿದ್ದರು.

Related posts: