ಗೋಕಾಕ:ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು : ಮುರುಘರಾಜೇಂದ್ರ ಶ್ರೀ ಎಚ್ಚರಿಕೆ

ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು : ಮುರುಘರಾಜೇಂದ್ರ ಶ್ರೀ ಎಚ್ಚರಿಕೆ

ಗೋಕಾಕ ಡಿ 3 : ಗೋಕಾಕ ಜಿಲ್ಲೆಗಾಗಿ ಆಗ್ರಹಿಸಿ ಇಂದು ಗೋಕಾಕ ನಗರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ಕೈಗೊಂಡಿದ್ದು, ಬರುವ ದಿನಗಳಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನಿಯೋಜಿತ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು ಅಧಿವೇಶನ ಸಂಧರ್ಭದಲ್ಲಿ ಗೋಕಾಕ ಜಿಲ್ಲೆ ಮಾಡುವಂತೆ ಒತ್ತಾಯಿಸಿ ನಿಯೋಗ ತಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿಯಾಗಿ ಗೋಕಾಕ ಜಿಲ್ಲೆ ಮಾಡುವಂತೆ ಆಗ್ರಹಿಸಿಲಾಗುವುದು ಮೂಡಲಗಿ ಮತ್ತು ಗೋಕಾಕ ತಾಲೂಕಿನ ಜನರು ಈ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸಿ ಹೋರಾಟಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ ಅಧಿಕಾರ ವಿಕೇಂದ್ರೀಕರಣ ಆಗಲು ಕರ್ನಾಟಕದ ಹಲವು ಜಿಲ್ಲೆಗಳು ವಿಭಜನೆಯಾಗಿವೆ. ಸಣ್ಣ, ಸಣ್ಣ ಜಿಲ್ಲೆಗಳು ಸಹ ವಿಭಜನೆ ಆಗಿ ಅಭಿವೃದ್ಧಿ ಹೊಂದಿವೆ. ಹಿಂದೆ ಕಾರವಾರ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳು ವಿಭಜನೆ ಆಗಿವೆ ಎಂದ ಅವರು ಮಹಾಜನ ವರದಿ ಬೆಳಗಾವಿ ಜಿಲ್ಲೆ ವಿಭಜನೆಯಾಗಲು ಯಾವುದೇ ತೊಂದರೆಯಾಗುವುದಿಲ್ಲ. ಬೆಳಗಾವಿಗೆ ತೊಂದರೆ ಬಂದರೆ ಮೊದಲು ಹೋರಾಟಕ್ಕೆ ಇಳಿಯುವವರೆ ಗೋಕಾಕ ಜನತೆ. ಆದ್ದರಿಂದ ಗೋಕಾಕ ತಾಲೂಕನ್ನು ಆದಷ್ಟು ಬೇಗ ಜಿಲ್ಲೆ ಮಾಡಬೇಕು. ಬರುವ ಡಿಸೆಂಬರ್ 31 ರ ಒಳಗೆ ಹೊಸ ಜಿಲ್ಲೆಯನ್ನು ಘೋಷಣೆ ಮಾಡಬೇಕು. ಚಿಕ್ಕೋಡಿ, ಬೈಲಹೊಂಗಲ, ಅಥಣಿಯವರು ಸಹ ಜಿಲ್ಲೆಗಾಗಿ ಹೋರಾಟ ಮಾಡುತ್ತಾರೆ ಆದರೆ ಕೊನೆಗೆ ಸರಕಾರ ಯಾವುದೇ ನಗರವನ್ನು ಜಿಲ್ಲೆ ಮಾಡಿದರೆ ಸೂಕ್ತ ಎಂದು ವಿಚಾರ ಮಾಡಿ ಡಿಸೆಂಬರ್ 31ರ ಒಳಗೆ ಗೋಕಾಕನ್ನು ಜಿಲ್ಲೆ ಎಂದು ಘೋಷಣೆ ಮಾಡಬೇಕು. ಇದರ ಬಗ್ಗೆ ಸರಕಾರ ಗಟ್ಟಿಯಾಗಿ ನಿರ್ಣಯ ತಗೆದುಕೊಳ್ಳಬೇಕು. ಸಚಿವ ಸತೀಶ ಜಾರಕಿಹೊಳಿ, ಶಾಸಕರುಗಳಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ವಿ.ಪ ಸದಸ್ಯ ಲಖನ್ ಜಾರಕಿಹೊಳಿ ಅವರು ಬೆಳಗಾವಿ ಅಧಿವೇಶನದಲ್ಲಿ ಗೋಕಾಕ ಜಿಲ್ಲೆಯ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದ ಅವರು ವಕೀಲರು ನ್ಯಾಯಾಲದ ಕಲಾಪ ಬಹಿಷ್ಕರಿಸಿ ಬೆಂಬಲ ನೀಡಿದರೆ ಮಾಧ್ಯಮದ ಮಿತ್ರರು ಸಹ ಗೋಕಾಕ ಜಿಲ್ಲೆ ಮಾಡಲು ಹಲವಾರು ರೀತಿಯ ಹೋರಾಟಗಳನ್ನು ಮಾಡಿ ಸರಕಾರವನ್ನು ಎಚ್ಚರಿಸುವ ಸುದ್ದಿಗಳನ್ನು ಮಾಡಿದ್ದಾರೆ ಎಂದರು.
ಹೋರಾಟ ಸಮಿತಿಯ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ ದಿವಂಗತ ನಿಂಗಯ್ಯ ಪೂಜಾರಿ ಅವರೊಂದಿಗೆ ಕೂಡಿ ಹಲವು ದಶಕಗಳಿಂದ ಹಲವು ರೀತಿಯ ಉಗ್ರ ಸ್ವರೂಪದ ಹೋರಾಟಗಳನ್ನು ಮಾಡಿ ಜಿಲ್ಲಾ ಹೋರಾಟವನ್ನು ಜೀವಂತವಾಗಿ ಇಟ್ಟಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿ.ಎಸ. ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಲವಾರು ಭಾರಿ ಮನವಿಯನ್ಞು ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಟ್ಟಿ ಮನಸ್ಸು ಮಾಡಿ ಗೋಕಾಕ ಜಿಲ್ಲೆಯನ್ನು ಮಾಡಬೇಕು ಎಂದ ಅವರು ಸರಕಾರದ ಮುಖ್ಯಮಂತ್ರಿಯನ್ನು ಬದಲು ಮಾಡುವ ಶಕ್ತಿಯನ್ನು ಹೊಂದಿರುವ ಜಾರಕಿಹೊಳಿ ಕುಟುಂಬ ಗೋಕಾಕ ಜಿಲ್ಲೆ ಮಾಡವು ನಿಟ್ಟಿನಲ್ಲಿ ಗಟ್ಟಿ ಧ್ವನಿ ಯಾಗಬೇಕು ಎಂದರು.
ಹಿರಿಯ ನ್ಯಾಯವಾದಿ ಶಶಿಧರ ದೇಮಶೆಟ್ಟಿ ಮಾತನಾಡಿ ಕಳೆದ 4 ದಶಕಗಳಿಂದ ನಾವು ಹೇಳಿದ್ದನ್ನೇ ಹೇಳುತ್ತಾ ಬಂದಿದ್ದೇವೆ.ಡಿಸೆಂಬರ್ 31 ರ ಒಳಗೆ ಜಿಲ್ಲೆ ಆಗದೆ ಇದ್ದರೆ ಮುಂದೆ 2 ವರ್ಷ ಜಿಲ್ಲೆ ಆಗುವುದಿಲ್ಲ. ದಶಕಗಳ ಹೋರಾಟವನ್ನು ಮನ್ನಿಸಿ ಸರಕಾರ ಗೋಕಾಕ ಜಿಲ್ಲೆಯನ್ನು ಮಾಡಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಸುಭಾಷ್ ಪಾಟೀಲ್ ಮಾತನಾಡಿ ಆಡಳಿತಾತ್ಮಕವಾಗಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ಮಾಡುವ ಅವಶ್ಯಕತೆ ಇದೆ.ಇದರಿಂದ ಆರ್ಥಿಕ ಅಭಿವೃದ್ಧಿ ಹೆಚ್ಚಿಗೆ ಆಗುತ್ತದೆ. ಸರಕಾರ 10 ಲಕ್ಷ ಜನಸಂಖ್ಯೆಗೆ ಒಂದು ಜಿಲ್ಲೆ ಮಾಡಬೇಕು ಆದರೆ ಬೆಳಗಾವಿಯ ಒಟ್ಟು ಜನಸಂಖ್ಯೆ ಪ್ರಸ್ತುತ 50 ಲಕ್ಷಕ್ಕೂ ಹೆಚ್ಚು ಇದೆ. ಬೆಳಗಾವಿ ಜಿಲ್ಲೆ ವಿಭಜಸಿ ಒಟ್ಟು 5 ಜಿಲ್ಲೆ ಮಾಡಬಹುದು ಅದನ್ನು ಮನಗಂಡು ಸರಕಾರ ಕೂಡಲೇ ಗೋಕಾಕ ಜಿಲ್ಲೆಯನ್ನು ಮಾಡಬೇಕು. ಸಚಿವ ಸಂಪುಟ ಸಭೆಯಲ್ಲಿ ಗೋಕಾಕ ಜಿಲ್ಲೆ ಮಾಡುವಂತೆ ಗೆಜೆಟ್ ಮಾಡಬೇಕು ಎಂದು ಆಗ್ರಹಿಸಿದರು.
ಕುರುಬರ ಸಂಘದ ಮಾಜಿ ರಾಜ್ಯಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ ಗೋಕಾಕ ಜಿಲ್ಲೆ ಆಗುವವವರೆಗೆ ಗೋಕಾಕ ಜಿಲ್ಲಾ ಹೋರಾಟ ಮುಂದೆವರೆಯಬೇಕು. ಕಳೆದ 4 ದಶಕಗಳಿಂದ ಸತತ ಹೋರಾಟ ಮಾಡಿದರು ಇದು ಜಿಲ್ಲೆ ಆಗಲಿಲ್ಲ. ಗೋಕಾಕ ಹೊತ್ತಿ ಉರಿಯುವ ಮುನ್ನ ಗೋಕಾಕ ಜಿಲ್ಲೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ರಾಮಣ್ಣ ಹುಕ್ಕೇರಿ ಮಾತನಾಡಿ ನಾವು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ , ಪ್ರತ್ಯೇಕ ರಾಷ್ಟ್ರ ಕೇಳುತ್ತಿಲ್ಲ ಬರೀ ಜಿಲ್ಲೆಯನ್ನು ಕೇಳುತ್ತಿದ್ದೇವೆ. ಆದಷ್ಟು ಬೇಗ ಗೋಕಾಕ ಜಿಲ್ಲೆ ಮಾಡಬೇಕು. ಜಾರಕಿಹೊಳಿ ಸಹೋದರರು ಆದಷ್ಟು ಬೇಗ ಗೋಕಾಕ ಜಿಲ್ಲೆ ಮಾಡುವ ನೇತೃತ್ವ ವಹಿಸಬೇಕು ಆಗ ಗೋಕಾಕ ಜನರು ಜಾರಕಿಹೊಳಿ ಸಹೋದರ ಫೋಟೋ ಜಗಲಿ ಮೇಲೆ ಇಟ್ಟು ಪೂಜೆ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಡಾ.ಮಹಾಂತೇಶ ಕಡಾಡಿ ಮಾತನಾಡಿ ಜಾರಕಿಹೊಳಿ ಸಹೋದರರಿಗೆ ಗೋಕಾಕ ಜಿಲ್ಲೆ ಮಾಡುವಷ್ಟು ಶಕ್ತಿ ಇದೆ. ಅವರು ಇಚ್ಚಾಶಕ್ತಿ ಪ್ರದರ್ಶಿಸಿ ಗೋಕಾಕ ಜಿಲ್ಲೆಯನ್ನು ಮಾಡಬೇಕು. ಪೂಜ್ಯರ ನೇತೃತ್ವದಲ್ಲಿ ನಿರಂತರ ಹೋರಾಟ ಸಂಘಟಿಸಬೇಕು ಎಂದು ಮನವಿ ಮಾಡಿದರು.
ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ಗೋಕಾಕ ಜಿಲ್ಲೆ ಕೇಂದ್ರವನ್ನು ಮಾಡಲು ಜಾರಕಿಹೊಳಿ ಸಹೋದರರ ಸಂಪೂರ್ಣ ಬೆಂಬಲ ಇದೆ. ಎಲ್ಲ ಸಾರ್ವಜನಿಕರು ಸಹಕಾರ ನೀಡಬೇಕು. ಇದೆ ತರಹ ಗಟ್ಟಿಯಾಗಿ ಗೋಕಾಕ ಜಿಲ್ಲಾ ಹೋರಾಟವನ್ನು ಮುಂದೆವರೆಸಬೇಕು . ಜಿಲ್ಲೆ ಆದರೆ ಮುಂದೆ ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತದೆ. ಯುವಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿಬೇಕು. ಆದಷ್ಟು ಬೇಗ ಜಿಲ್ಲೆ ಆಗುವದರಲ್ಲಿ ಸಂಶಯವಿಲ್ಲ ಎಂದು ಭರವಸೆ ನೀಡಿದರು.
ನಂತರ ಉಪವಿಭಾಗಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮುಂಜಾನೆ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಸಂಗೋಳ್ಳಿ ವೃತ್ತದಿಂದ ನಗರ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಬಸವೇಶ್ವರ ತಲುಪಿದರು.
ಗೋಕಾಕ ಬಂದ್ ಕರೆ ಕೊಟ್ಟಿದ್ದರಿಂದ ಮುಂಜಾನೆಯಿಂದಲೇ ಗೋಕಾಕ ನಗರದ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಬಂದ್ ನಿಮಿತ್ತ ಹೋರ ಊರಿಗೆ ಹೋಗುವ ಪ್ರಮಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಂದ್ ನಿಮಿತ್ತ ಗೋಕಾಕ ನರಗ ಸಂಪೂರ್ಣ ಬಿಕ್ಕೋ ಅನ್ನುವಂತಿತ್ತು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರುಗಳು, ರೈತ ಸಂಘಟನೆಯ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ವ್ಯಾಪಾರಸ್ಥರು, ನಗರಸಭೆ ಸದಸ್ಯರುಗಳು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

