ಬೆಟಗೇರಿ:ಕೊರೋನಾ ವೈರಸ ತಡೆಗಟ್ಟುವಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ಸ್ವಯಂ ಸೇವಕರು
ಕೊರೋನಾ ವೈರಸ ತಡೆಗಟ್ಟುವಲ್ಲಿ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ಸ್ವಯಂ ಸೇವಕರು
ಅಡಿವೇಶ ಮುಧೋಳ. ಬೆಟಗೇರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 23:
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ದೇಶಾದ್ಯಂತ ಹರಡುತ್ತಿರುವ ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಳೆದೊಂದು ತಿಂಗಳಿಂದ ಮುನ್ನೆಚ್ಚರಿಕೆ ಕ್ರಮಗಳ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಬೆಟಗೇರಿ ಗ್ರಾಮದ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.
ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಶಿಕ್ಷಣದ ವಿವಿಧ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳು, ಹೋಮ್ ಕ್ವಾರಂಟೈನ್‍ನಲ್ಲಿರುವ ಗ್ರಾಮದ ಜನರ ಮನೆ ಮನೆಗೆ ಪ್ರತಿ ದಿನ ಭೇಟಿ ನೀಡಿ ಅವರ ಆರೋಗ್ಯದ ಮಾಹಿತಿ ಪಡೆಯುವ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕರೊನಾ ಸೈನಿಕರ ಸ್ವಯಂ ಪ್ರೇರರಿತ ಸೇವೆ: ಸ್ಥಳೀಯ ಕರವೇ ಗ್ರಾಮ ಘಟಕದ ಪದಾಧಿಕಾರಿಗಳು, ಸದಸ್ಯರು ಸ್ವಯಂ ಪ್ರೇರಿತರಾಗಿ ಕಳೆದ ಇಪ್ಪತ್ತು ದಿನಗಳಿಂದ ಕರೋನಾ ಸೈನಿಕರಾಗಿ ನಿಗದಿತ ಅವಧಿಯಲ್ಲಿ ಬಾಗಿಲು ತೆರೆದ ಕಿರಾಣಿ ಅಂಗಡಿ, ಹಾಲಿನ ಡೈರಿ, ಬ್ಯಾಂಕ್ ಸೇರಿದಂತೆ ಊರಿನ ಪ್ರಮುಖ ಸ್ಥಳಗಳಲ್ಲಿ ನಿಂತುಕೊಂಡು ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ, ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕರೊನಾ ವೈರಸ್ ನಿಯಂತ್ರಣಾ ಕ್ರಮಗಳನ್ನು ಅನುಸರಿಸುವಂತೆ ಸ್ಥಳೀಯರಲ್ಲಿ ಮನವರಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿದಿನ ಗ್ರಾಪಂ ಸಿಬ್ಬಂದಿ, ಪಿಎಚ್‍ಸಿ ಸಿಬ್ಬಂದಿ ಇವರಿಗೆ ಸಾಥ್ ನೀಡುತ್ತಿದ್ದಾರೆ.
ಬಾಕ್ಸ್ ಐಟಮ್: ಜನಜಾಗ್ರತಾ ಕಾರ್ಯಕ್ಕೆ ಮೆಚ್ಚುಗೆ: ಬೆಟಗೇರಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕರೊನಾ ವೈರಸ್ ನಿಯಂತ್ರಣಾ ಕ್ರಮಗಳ ಕುರಿತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜೋತೆ ವೈದ್ಯಕೀಯ ಶಿಕ್ಷಣದ ವಿವಿಧ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳು, ಕರವೇ ಗ್ರಾಮ ಘಟಕದ ಪದಾಧಿಕಾರಿಗಳು, ಸದಸ್ಯರು, ಟಾಸ್ಕ್ ಪೊರ್ಸ್ ಸಮಿತಿ ಸದಸ್ಯರು ಸ್ವಯಂ ಪ್ರೇರಿತರಾಗಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ಕೆ, ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಹನುಮಂತ ನರಳೆ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಕಾರ್ಯನಿರತ ಪೊಲೀಸ್ ಪೇದೆಗಳ ಸೇವೆಯನ್ನು ಕರೊನಾ ನೋಡಲ್ ಅಧಿಕಾರಿ ಜಿ.ಬಿ.ಬಳಿಗಾರ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಹಿನ್ನಲೆಯಲ್ಲಿ ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನುಮಂತ ನರಳೆ ಹಾಗೂ ಪೊಲೀಸ್ ಪೇದೆಗಳು ಗ್ರಾಮದೆಲ್ಲಡೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಸ್ಥಳೀಯ ಪೊಲೀಸ್ ಚೆಕ್ ಪೋಸ್ಟ್‍ನಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೆ, ಅನವಶ್ಯಕ ತಿರಗಾಡುವವರಿಗೆ ಖಡಕ್ ಸೂಚನೆ ನೀಡಿ ಮನೆಯಲ್ಲಿರುವಂತೆ ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಕಿರಾಣಿ ಅಂಗಡಿ ಹಾಗೂ ಹಾಲಿನ ಡೈರಿ ಬಾಗಿಲು ತೆರೆಯುವ ನಿಗದಿತ ಅವಧಿ ಹೊರತುಪಡಿಸಿ ಕಳೆದ ಒಂದು ತಿಂಗಳಿಂದ ಗ್ರಾಮದೆಲ್ಲಡೆ ನಿಶಬ್ಧ್ ವಾತಾವಾರಣ ಕಾಣುತ್ತಿದೆ. ಪ್ರಮುಖ ಓಣಿ ಬೀದಿ, ಸ್ಥಳಗಳು ಬಿಕ್ಕೋ ಎನ್ನುತ್ತಿವೆ.