ಗೋಕಾಕ:ಜಿಲ್ಲಾ ನ್ಯಾಯಾಲಯ ಕಟ್ಟಡ 13ತಿಂಗಳೊಳಗೆ ಸ್ಥಾಪನೆ : ಆರ್.ಜೆ.ಸತೀಶಸಿಂಗ್
ಜಿಲ್ಲಾ ನ್ಯಾಯಾಲಯ ಕಟ್ಟಡ 13ತಿಂಗಳೊಳಗೆ ಸ್ಥಾಪನೆ : ಆರ್.ಜೆ.ಸತೀಶಸಿಂಗ್
ಗೋಕಾಕ ಡಿ 10 : ಅಧುನಿಕ ತಂತ್ರಜ್ಞಾನದಿಂದ ಕೂಡಿದ ಈ ಫೈಲಿಂಗ್ ವ್ಯವಸ್ಥೆಯನ್ನೊಳಗೊಂಡ ಹವಾ ನಿಯಂತ್ರಿತ ಜಿಲ್ಲಾ ನ್ಯಾಯಾಲಯ ಕಟ್ಟಡ ಇನ್ನು 13ತಿಂಗಳೊಳಗೆ ಇಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಬೆಳಗಾವಿಯ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಆರ್.ಜೆ.ಸತೀಶಸಿಂಗ್ ತಿಳಿಸಿದರು.
ಸೋಮವಾರ ಇಲ್ಲಿಯ ನ್ಯಾಯಾಲಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ನ್ಯಾಯಾಲಯಗಳು ತಂತ್ರಜ್ಞಾನಗಳು ಅಳವಡಿಸಿಕೊಂಡರೆ ಸಾಲದು ಅದಕ್ಕೆ ಪ್ರತಿಯಾಗಿ ಎಲ್ಲ ವಕೀಲ ಬಾಂಧವರೂ ಕೂಡ ಕಂಪ್ಯೂಟರ್ ಇಲ್ಲವೇ ಲ್ಯಾಪ್ ಟಾಪ್‍ಗಳನ್ನು ಬಳಸಿ ತಂತ್ರಜ್ಞಾನದ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಕಕ್ಷೀಗಾರರಿಗೆ ಶೀಘ್ರ ನ್ಯಾಯದಾನ ವ್ಯವಸ್ಥೆಯ ಪ್ರಯೋಜನೆ ದೊರಕುವಂತೆ ಮಾಡಬೇಕು ಎಂದು ಕರೆ ನೀಡಿದರು.
ವಿನೂತನ ವ್ಯವಸ್ಥೆಯುಳ್ಳ ಕಟ್ಟಡ ಇಲ್ಲಿ ಕಾರ್ಯಾರಂಭ ಮಾಡುತ್ತಲೇ ನೀವ್ಯಾರೂ ಜಿಲ್ಲಾ ನ್ಯಾಯಾಲಯ ದಾಖಲಿಸಬೇಕಿರುವ ಪ್ರಕರಣಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಬಂದು-ಹೋಗುವ ತಾಪತ್ರಯ ತಪ್ಪಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಅವರು ಮಾತನಾಡಿ, ಜಿಲ್ಲಾ ನ್ಯಾಯಾಲಯ ಹೊಂದಬೇಕೆಂಬ ಇಲ್ಲಿಯ ವಕೀಲರ ಬಹು ವರ್ಷಗಳ ನಿರಿಕ್ಷೆಯ ಫಲವಾಗಿ ಮೊದಲು ತ್ವರಗತಿ ನ್ಯಾಯಾಲಯ ಸ್ಥಾಪನೆಗೊಂಡು, ತದನಂತರ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಆಯಿತು. ಇದೀಗ ತಾಂತ್ರಿಕ ಅನಕೂಲತೆಯನ್ನು ಒಳಗೊಂಡ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿರುವುದು ಇಲ್ಲಿಯ ವಕೀಲ ಬಾಂಧವರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ ಎಂದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ವತಿಯಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾದೀಶ ಆರ್.ಜೆ.ಸತೀಶ ಸಿಂಗ್ ಮತ್ತು 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಮೀನಾಕ್ಷಿ ಬಾನಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾದ ಡಿ.ವೈ.ಖಂಡೇಪಟ್ಟಿ ಮತ್ತು ಡಿ.ಎಂ. ಮಡಿವಾಳರ, ಪ್ರಧಾನ ಕಾರ್ಯದರ್ಶಿ ಸಿ.ಬಿ.ಗಿಡ್ನವರ, ಸಹ-ಕಾರ್ಯದರ್ಶಿ ಡಸ್.ಎಸ್.ಜಿಡ್ಡಿಮನಿ, ಖಜಾಂಚಿ ಬಿ.ಬಿ.ಬೀರನಗಡ್ಡಿ. ಮತ್ತು ಮಹಿಳಾ ಪ್ರತಿನಿಧಿ ಕು. ಕೆ.ಕೆ.ಬಡಿಗೇರ ಉಪಸ್ಥಿತರಿದ್ದರು.
ಸಮಾರಂಭದಲ್ಲಿಪ್ರಧಾನ ಹಿರಿಯ ದಿವಾಣಿ ನ್ಯಾಧೀಶೆ ವಿಮಲ್ ನಂದಗಾಂವ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮೋಹನ ಫೋಳ ಮೊದಲಾದವರು ಪಾಲ್ಗೊಂಡಿದ್ದರು.
ವಕೀಲರ ಬಿ.ಟಿ.ಬೀರಗಡ್ಡಿ ಪ್ರಾಸ್ತಾವಿಕ, ಮಾತುಗಳನ್ನಾಡಿದರು. ವಕೀಲ ಎಸ್.ಜಿ.ನಿಶಾಮಠ ಪ್ರಾರ್ಥಿಸಿದರು. ವಕೀಲ ಎ.ವಿ.ಹುಲಗಬಾಳಿ ಕಾರ್ಯಕ್ರಮ ನಿರೂಪಿಸಿದರು. ವಕೀಲ ಮತ್ತು ನೋಟರಿ ಪಬ್ಲಿಕ್ ಶಂಕರ ಗೋರೋಶಿ ಸ್ವಾಗತಿಸಿ ವಂದಿಸಿದರು.