ಗೋಕಾಕ:ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ
ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ
ಗೋಕಾಕ ನ 14 : ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಲೋಪ ರಹಿತ ಮತದಾರರ ಯಾದಿಯ ಪರಿಶೀಲನೆ ಕಾರ್ಯವು ಭರದಿಂದ ಜರುಗಿದ್ದು ಅಧಿಕಾರಿಗಳು ಸಕ್ರೀಯವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಲೋಕಸಭಾ ಚುನಾವಣಾ ಜಿಲ್ಲಾ ಉಸ್ತುವಾರಿ ಪಿ.ಎ.ಮೇಘಣ್ಣವರ ಹೇಳಿದರು.
ಅವರು ಬುಧವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಮತದಾರರ ಯಾದಿ ಪರಿಷ್ಕರಣೆ ಕಾರ್ಯದ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಮತದಾರರ ಪಟ್ಟಿಯ ಕುರಿತು ಪರಿಶೀಲನೆ ನಡೆಸಿದ್ದೇನೆ. ಬಿಎಲ್‍ಓ ಗಳು ಮನೆ ಮನೆಗಳಿಗೆ ತೆರಳಿ ಮತದಾರರ ಸರಿಯಾದ ವಿವರವನ್ನು ಪಡೆದು ಲೋಪರಹಿತ ಮತದಾರರ ಯಾದಿ ತಯ್ಯಾರಿಸಲು ಸೂಚಿಸಿದ್ದು ಅವರಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಹೇಳಿದರು. ಇದೇ ತಿಂಗಳು ದಿ.20ರೊಳಗೆ ಸೇರ್ಪಡೆ, ವರ್ಗಾವಣೆ, ತಿದ್ದುಪಡಿ, ಕಡಿತ ಇತ್ಯಾದಿ ಮಾಹಿತಿಗಳನ್ನು ಸಾರ್ವಜನಿಕರು ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಬರುವ 2019 ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ.ತಹಶೀಲ್ದಾರ ಜಿ.ಎಸ್.ಮಳಗಿ, ಗ್ರೇಡ -2 ತಹಶೀಲ್ದಾರ ಎಸ್.ಕೆ.ಕುಲಕರ್ಣಿ, ಉಪತಹಶೀಲ್ದಾರ ಎಲ್.ಎಚ್.ಭೋವಿ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.