ಗೋಕಾಕ:ರಾಷ್ಟ್ರಪ್ರೇಮ ಮೆರೆದ ಮಹಾನ್ ಚೇತನ ಟಿಪ್ಪುಸುಲ್ತಾನ-ಮೌಲಾನಾ ಸುಬಹಾನ
ರಾಷ್ಟ್ರಪ್ರೇಮ ಮೆರೆದ ಮಹಾನ್ ಚೇತನ ಟಿಪ್ಪುಸುಲ್ತಾನ-ಮೌಲಾನಾ ಸುಬಹಾನ
ಗೋಕಾಕ ನ.10-ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಸೇರಿದಂತೆ ಅನೇಕ ರಂಗಗಳಲ್ಲಿ ಪರಿಣಿತಿ ಹೊಂದಿ ರಾಷ್ಟ್ರಪ್ರೇಮವನ್ನು ಮೆರೆದ ಮಹಾನ್ ಚೇತನ ಟಿಪ್ಪು ಎಂದು ಮೌಲಾನಾ ಸುಬಹಾನ ಹೇಳಿದರು.
ಶನಿವಾರದಂದು ನಗರದ ತಾ.ಪಂ. ಸಭಾ ಭವನದಲ್ಲಿ ತಾಲೂಕಾಡಳಿತ, ತಾ.ಪ., ನಗರಸಭೆ ಸಂಯುಕ್ತಾಶ್ರಯದಲ್ಲಿ ಆಚರಿಸಲಾದ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ ಅವರ ಜಯಂತಿ ಉತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ಭಾವೈಕ್ಯತೆಗೆ ಹೆಸರಾದ ಭಾರತದ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ದೇಶದ ಪ್ರತಿಯೊಬ್ಬ ನಾಗರಿಕನೂ ಭಾರತೀಯ ಸಂವಿಧಾನದಡಿ ಪರಸ್ಪರ ಸೌಹಾರ್ದತೆಯಿಂದ ಬದುಕಿ ಬಾಳಿದರೆ ಭವ್ಯ ಭಾರತ ಕಟ್ಟಲು ಸಾಧ್ಯ. ಟಿಪ್ಪುಸುಲ್ತಾನ ಆಡಳಿತದಲ್ಲಿ ಹಿಂದು ಬಾಂಧವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದರು. ಅವರ ಮಂತ್ರಿಯಾಗಿ ಪೂರ್ಣಯ್ಯ ಪಂಡಿತರು ಕಾರ್ಯ ನಿರ್ವಹಿಸುತ್ತಿದ್ದರು. ಟಿಪ್ಪುಸುಲ್ತಾನ ಆಡಳಿತಾವಧಿಯಲ್ಲಿ ಸರ್ವ ಧರ್ಮದವರನ್ನು ಸಮಾನತೆಯಿಂದ ಕಂಡು ಆಡಳಿತ ನಡೆಸಿದ್ದರು. ಇಂದು ನಾವೆಲ್ಲರೂ ಭಾರತೀಯರು ಟಿಪ್ಪು ಹಾಕಿಕೊಟ್ಟ ದೇಶಪ್ರೇಮ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಾಗಬೇಕಾಗಿದೆ. ಎಂದು ತಿಳಿಸಿದರು.
ಟಿಪ್ಪುಸುಲ್ತಾನ ಅವರು ಭಾರತದ ಒಂದೊಂದು ಸಂಸ್ಥಾನಗಳನ್ನು ಬ್ರಿಟಿಷರು ಕಬಳಿಸುತ್ತಿರುವದನ್ನು ಕಂಡು ದೇಶದ ಸಂಸ್ಥಾನಗಳನ್ನು ಒಂದುಗೂಡಿಸಿ ಬ್ರಿಟಿಷರನ್ನು ಭಾರತದಿಂದ ಓಡಿಸಲು ಪ್ರಯತ್ನಿಸಿದ್ದರು. ಇದಕ್ಕೆ ಫ್ರೆಂಚರ ನೆರವು ಸಹ ಕೋರಿದ್ದನ್ನು ಮೌಲಾನಾ ಸುಬಹಾನ ಸ್ಮರಿಸಿದರು.
ಕಾರ್ಯಕ್ರಮವನ್ನು ಟಿಪ್ಪು ಅವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಮಾಡುವ ಮೂಲಕ ಗಣ್ಯರು ಉದ್ಘಾಟಿಸಿದರು.
ಟಿಪ್ಪುಸುಲ್ತಾನ ಕುರಿತು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ತಹಶೀಲದಾರ ಜಿ.ಎಸ್.ಮಳಗಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಕಾರಿಸಾಬ ಜಬೀವುಲ್ಲಾ, ಬೆಳಗಾವಿಯ ಸದಾಕತ್‍ಅಲಿ ಮಕಾನದಾರ, ನಗರಸಭಾ ಸದಸ್ಯ ಎಸ್.ಎ.ಕೊತವಾಲ. ಮಾಜಿ ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಪೌರಾಯುಕ್ತ ಎಮ್.ಎಚ್. ಅತ್ತಾರ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುಲಕರ್ಣಿ, ಬಿಸಿಯೂಟ ಯೋಜನಾಧಿಕಾರಿ ಎ.ಬಿ.ಮಲಬನ್ನವರ, ಕರ್ನಾಟಕ ನವನಿರ್ಮಾಣ ಸೇನೆಯ ಯುನೂಸ ನದಾಫ, ಗ್ರೇಡ್-2 ತಹಶೀಲದಾರ ಎಸ್.ಕೆ. ಕುಲಕರ್ಣಿ ಇದ್ದರು.
ಎ.ಜಿ.ಕೋಳಿ ಸ್ವಾಗತಿಸಿ, ವಂದಿಸಿದರು.