ಬೆಳಗಾವಿ:ಸಚಿವ ರಮೇಶ್ ಹಾಗೂ ಶಾಸಕಿ ಹೆಬ್ಬಾಳ್ಕರ್ ನಡುವಿನ ಉತ್ತಮ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟ ಪಿಎಲ್‍ಡಿ ಬ್ಯಾಂಕ್
ಸಚಿವ ರಮೇಶ್ ಹಾಗೂ ಶಾಸಕಿ ಹೆಬ್ಬಾಳ್ಕರ್ ನಡುವಿನ ಉತ್ತಮ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟ ಪಿಎಲ್‍ಡಿ ಬ್ಯಾಂಕ್
ಬೆಳಗಾವಿ ಸೆ 1 : ಬೆಂಗಳೂರು ನಂತರ ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯ ರಾಜಕಾರಣಿಗಳ ಬ್ಯಾಂಕ್ ರಾಜಕಾರಣದ ಕಿತ್ತಾಟ ರಾಜ್ಯದ ಗಮನ ಸೆಳೆದಿದೆ
ಗದ್ದುಗೆಯ ಆಸೆಗಾಗಿ ಕುಚುಕು ಗೆಳೆಯರ ದೋಸ್ತಿಗೆ ಕುತ್ತು ತಂದ ಈ ಬ್ಯಾಂಕ್ ರಾಜಕಾರಣ ಜಿಲ್ಲೆಯ ರಾಜಕೀಯದಲ್ಲಿ ಕರಾಳ ಅಧ್ಯಾಯಕ್ಕೆ ನಾಂದಿ ಹಾಡಿದೆ. ಬ್ಯಾಂಕ್ ರಾಜಕಾರಣ ಈ ಹಿಂದೆ ಒಂದಾಗಿದ್ದ ಉಮೇಶ ಕತ್ತಿ ಹಾಗೂ ಲಕ್ಷ್ಮಣ ಸವದಿಯನ್ನು ಇಬ್ಬಾಗ ಮಾಡಿತ್ತು. ಇದೀಗ ಮತ್ತೊಂದು ಇಂಥ ಪ್ರಕರಣ ಹೊರಬಿದ್ದಿದ್ದು ಇದೀಗ ಜಾರಕಿಹೊಳಿ ಕುಟುಂಬ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ದೂರ ಮಾಡುತ್ತಿದೆ. ಬ್ಯಾಂಕ್ ರಾಜಕಾರಣದಲ್ಲಿ ಮೇಲುಗೈ ಸಾಧಿಸಲು ಅಮರ ಸ್ನೇಹ ಹಾಳು ಮಾಡಿಕೊಂಡಿರುವ ಜಿಲ್ಲೆಯ ರಾಜಕಾರಣಿಗಳ ದುರಂತದ ಕಥೆ ಇಲ್ಲಿದೆ ನೋಡಿ.
ಸವದಿ ಹಣಿದ ಕತ್ತಿ ಕುಟುಂಬ!
ಜಾರಕಿಹೊಳಿ ಕುಟುಂಬಕ್ಕಿಂತ ಜಿಲ್ಲೆಯ ರಾಜಕಾರಣದ ಹಿಡಿತ ಇರುವುದು ಕತ್ತಿ ಕುಟುಂಬದ ಕೈಯಲ್ಲಿಯೆ ಎಂಬ ಮಾತು ಸುಳ್ಳಲ್ಲ. 8 ಸಲ ಶಾಸಕರಾಗಿ ಎರಡ್ಮೂರು ಸಲ ಸಚಿವರಾಗಿದ್ದ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಸಂಸದ ಆಗುವುದಕ್ಕಿಂತ ಮುಂಚೆ ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಮುಂದಿರುವ ಡಿಸಿಸಿ ಬ್ಯಾಂಕ್ ಸಾರಥ್ಯ ವಹಿಸಿಕೊಂಡಿದ್ದರು.
ಸಂಸದ ಆಗುವುದಕ್ಕಿಂತ ಮೊದಲು ರಮೇಶ್ ಕತ್ತಿ ಎರಡು ಸಲ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿಗೆ ಏರಿದ್ದರು. 2008 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ರಮೇಶ್ ಕತ್ತಿ ಅವರ ಜಾಗವನ್ನು ಅಥಣಿಯ ಸಹಕಾರಿ ಧುರೀಣ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಆಕ್ರಮಿಸಿಕೊಂಡಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ರಮೇಶ್ ಕತ್ತಿ ಪರಾಭವಗೊಂಡರು. ಖಾಲಿ ಇದ್ದ ಸಹೋದರನಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹುದ್ದೆಗೇರಿಸುವಲ್ಲಿ ಮತ್ತೆ ಶಾಸಕ ಉಮೇಶ್ ಕತ್ತಿ ಯಶಸ್ವಿಯಾಗಿದ್ದರು. ಸಹೋದರನ ಮೇಲಿನ ವ್ಯಾಮೋಹಕ್ಕೆ ಉತ್ತಮ ಬಾಂಧವ್ಯ ಹೊಂದಿದ್ದ ಕತ್ತಿ ಹಾಗೂ ಸವದಿ ಕುಟುಂಬ ಇಬ್ಬಾಗ ಮಾಡಿಸಿದ್ದ ಡಿಸಿಸಿ ಬ್ಯಾಂಕ್ ರಾಜಕಾರಣ, ಹಾವು-ಮುಂಗೂಸಿಯಂತಿದ್ದ ಕತ್ತಿ-ಜಾರಕಿಹೊಳಿ ಕುಟುಂಬವನ್ನು ಬೆಸೆಯಿತು. ಆಗ ಸವದಿಯಿಂದ ಕತ್ತಿ ಕುಟುಂಬ, ಜಾರಕಿಹೊಳಿ ಕುಟುಂಬದಿಂದ ದೂರ ಮಾಡಿಸಿದ ಈ ಬ್ಯಾಂಕ್ ರಾಜಕಾರಣ, ಇದೀಗ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬವನ್ನು ಮತ್ತೆ ಬೆಸೆದಿದೆ.
ಜಾರಕಿಹೊಳಿ ಕುಟುಂಬದ ವಿರುದ್ಧ ಲಕ್ಷ್ಮಿ ಸೆಣಸು!
ರಾಜ್ಯದ ಎಲ್ಲೆಡೆ ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಡೆದರೂ, ರಾಜ್ಯಮಟ್ಟದಲ್ಲಿ ಸುದ್ದಿಯಾಗಲಿಲ್ಲ. ಆದರೆ ಬೆಳಗಾವಿ ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುವ ಜತೆಗೆ ಜಿಲ್ಲೆಯ ಕೈ ನಾಯಕರ ಕಲಹ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದೆ.
ಮೊದಲ ಸಲ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜಾರಕಿಹೊಳಿ ಕುಟುಂಬದ ಕೈಯಲ್ಲಿದ್ದ ಬೆಳಗಾವಿ ಪಿಎಲ್‍ಡಿ ಬ್ಯಾಂಕ್ನ್ನು ತನ್ನ ವಶ ಮಾಡಿಕೊಳ್ಳಲು ಮುಂದಾಗಿದ್ದೇ ಈ ಬೆಳವಣಿಗೆಗೆ ಕಾರಣ. ಸಹೋದರನ ವಿರುದ್ಧ ತಿರುಗಿಬಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಡಿದೆದ್ದಿರುವ ಸಚಿವ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷಿ ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದಿದ್ದು, ಸತೀಶ್ ಬೆಂಬಲಕ್ಕೆ ನಿಂತಿದ್ದಾರೆ.
ಸಚಿವ ರಮೇಶ್ ಹಾಗೂ ಶಾಸಕಿ ಹೆಬ್ಬಾಳ್ಕರ್ ನಡುವಿನ ಉತ್ತಮ ಸ್ನೇಹಕ್ಕೆ ಎಳ್ಳು-ನೀರು ಬಿಟ್ಟ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಾವು-ಮುಂಗೂಸಿಯಂತಿದ್ದ ಜಾರಕಿಹೊಳಿ ಸಹೋದರರನ್ನು ಒಂದು ಮಾಡಿದೆ.
ಈ ಹಿಂದೆ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೆಣಸಾಟ ನಡೆದಿದ್ದು ಜಿಲ್ಲೆಯ ಕಮಲ ನಾಯಕರ ನಡುವೆ. ಆದರೆ ಇಂದು ಪಿಎಲ್‍ಡಿ ಬ್ಯಾಂಕ್ ಚುನಾವಣೆ ಗದ್ದುಗೆಗೆ ಕೈ ನಾಯಕರ ನಡುವಿನ ಜಗಳ ಬೀದಿಗೆ ಬಂದಿದ್ದು ಮಾತ್ರ ವಿಪರ್ಯಾಸ.