ಮೂಡಲಗಿ:ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ
ಅದ್ದೂರಿಯಿಂದ ಜರುಗಿದ ವೀರಭದ್ರೇಶ್ವರ ರಥೋತ್ಸವ
ಮೂಡಲಗಿ ಅ 28 : ಇಲ್ಲಿಯ ಶ್ರೀ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ರಥೋತ್ಸವ ಸಹಸ್ರರು ಭಕ್ತರ ಹರ.. ಹರಾ ..ಮಹಾದೇವ.. ವೀರಭದ್ರೇಶ್ವರ ಮಹಾರಾಜ ಕೀ ಜೈ ಎಂಬ ಹರ್ಷೋದ್ಗಾರದ ನಡುವೆ ಅದ್ದೂರಿಯಿಂದ ಮಂಗಳವಾರ ಸಂಜೆ ಜರುಗಿತು.
ಸುಣಧೋಳಿ ಜಡಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥೋತ್ಸವದಲ್ಲಿ ಝಾಂಜ ಪಥಕ, ಕರಡಿ ಮಜಲು, ಡೊಳ್ಳಿನ ಮೇಳ, ಪಲ್ಲಕ್ಕಿ, ವಿವಿಧ ವಾಧ್ಯ ಮೇಳ, ಆನೆಯ ಸವಾರಿ ಭಾಗವಹಿಸಿ ಮೆರಗು ನೀಡಿದವು. ಉತ್ಸಾಹಿ ಯುವಕರು ಸಿಡಿಮದ್ದು ಸಿಡಿಸುತ್ತ ವಾದ್ಯಗಳ ಸಂಗೀತಕ್ಕೆ ಕುಣಿದು ಕುಪ್ಪಳಿಸಿ ಭಕ್ತಿ ಭಾವ ಮೆರೆದರು.
ಶ್ರೀ ವೀರಭದ್ರೇಶ್ವರ ರಥವೂ ಬಗೆಬಗೆಯ ಹೂವು ಮತ್ತು ದೀಪಾಲಂಕೃತದಿಂದ ಕಂಗೊಳಿಸುತಿತ್ತು. ಪುರವಂತರು ಪುರವಂತಿಕೆಯ ವೇಷಭೂಷಣ ಧರಿಸಿ ಶಸ್ತ್ರಗಳನ್ನು ಚುಚ್ಚಿಕೊಂಡು ಒಡಪು ಹೇಳುವ ರುದ್ರಾವೇಶದ ದೃಶ್ಯವೂ ನೆರೆದಿದ್ದ ಭಕ್ತರಲ್ಲಿ ಭಕ್ತಿ ಮೂಡುವಂತೆ ಮಾಡಿತು. ಭಕ್ತರು ರಥಕ್ಕೆ ಬೆಂಡು ಬತ್ತಾಸ ಹಾರಿಸಿ ತಮ್ಮ ಹರಕೆಯನ್ನು ಸಮರ್ಪಿಸಿದರು. ರಥೋತ್ಸವದಲ್ಲಿ ಊರಿನ ಗಣ್ಯರು ಸೇರಿದಂತೆ ಸಹಸ್ರರು ಭಕ್ತರು ಪಾಲ್ಗೋಂಡಿದ್ದರು.