ಗೋಕಾಕ:ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
ಆ.6 ರಿಂದ ಬೆಟಗೇರಿ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
* ವಿವಿಧ ಸ್ಪರ್ಧೆಗಳು * ನಗೆಹಬ್ಬ* ಹಲವು ಧಾರ್ಮಿಕ ಕಾರ್ಯಕ್ರಮಗಳು * ಸತ್ಕಾರ ಸಮಾರಂಭ
ಬೆಟಗೇರಿ ಅ 2 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾಮಹೋತ್ಸವ ಇದೇ ಸೋಮವಾರ ಆಗಸ್ಟ್.6 ರಿಂದ ಆಗಸ್ಟ್.10 ರವರೆಗೆ ಅದ್ಧೂರಿಯಾಗಿ ನಡೆಯಲಿದೆ.
ಆ.6 ರಂದು ಬೆಳಗ್ಗೆ 8 ಗಂಟೆಗೆ ಶ್ರೀದೇವಿಯ ಗುಡಿಯ ಮುಂದೆ ಹಂದರ ಹಾಕುವುದು ಮತ್ತು ಊರಲ್ಲಿ ಅಂಕಿತ ಹಾಕುವ ಕಾರ್ಯಕ್ರಮ ನಡೆದು, ಸಾಯಂಕಾಲ 4 ಗಂಟೆಗೆ ಊರಿನ ಸೀಮೆಯಿಂದ ದ್ಯಾಮವ್ವದೇವಿ ಮೂರ್ತಿಯನ್ನು ಸ್ಥಳೀಯ ಅಡವಿಸಿದ್ಧೇಶ್ವರ ದೇಗುಲಕ್ಕೆ ಸುಮಮಗಲೆಯರ ಆರತಿ, ಸಕಲ ವಾಧ್ಯಮೇಳ, ಮೆರವಣಿಗೆಯೊಂದಿಗೆ ತಂದು ಕೂಡ್ರಿಸುವದು. ರಾತ್ರಿ 10ಗಂಟೆಗೆ ಗ್ರಾಮದೇವಿ ನಾಟ್ಯ ಸಂಘದವರಿಂದ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಆ.7 ರಂದು ಮುಂಜಾನೆ 8ಗಂಟೆಗೆ ಪುರದೇವರ ಪಲ್ಲಕ್ಕಿ, ಸುಮಂಗಲೆಯರ ಆರತಿ, ಕುಂಭ ಮತ್ತು ವಾಧ್ಯಮೇಳಗಳೊಂದಿಗೆ ಸ್ಥಳೀಯ ಅಡವಿಸಿದ್ಧೇಶ್ವರ ದೇಗುಲದಿಂದ ಬಸ್ ನಿಲ್ದಾಣದ ಮೂಲಕ ಗ್ರಾಮದೇವತೆ ಮೂರ್ತಿಯನ್ನು ಗ್ರಾಮದ ಗೌಡರ ಕಟ್ಟೆಗೆ ತಂದು ಕೂಡ್ರಿಸಿದ ಬಳಿಕ ಪುರ ಜನರಿಂದ ಶ್ರೀದೇವಿಯ ಉಡಿ ತುಂಬುವ, ನೈವೇಧ್ಯ ಅರ್ಪಣೆ ನಡೆದು, ಮದ್ಯಾಹ್ನ 12 ಗಂಟೆಗೆ ಓಪನ್ ಮತ್ತು 2 ಗಂಟೆಗೆ ನಾಲ್ಕು ಹಲ್ಲಿನ ಟಗರಿನ ಕಾಳಗ ಸ್ಪರ್ಧೆ ನಡೆಯಲಿದೆ. ರಾತ್ರಿ ಗ್ರಾಮದ ಪ್ರಮುಖ ಬೀದಿಯಲ್ಲಿ ಶ್ರೀ ದೇವಿಯ ಹೊನ್ನಾಟ ಜರುಗಿ, ಇಲ್ಲಿಯ ಉದ್ದಮ್ಮಾ ಗುಡಿಗೆ ಗ್ರಾಮದೇವತೆ ಮೂರ್ತಿ ತಂದು ಕೂಡ್ರಿಸುವದು.
ಆ.8 ರಂದು ಮುಂಜಾನೆ 7 ಗಂಟೆಗೆ ದೇವಿಗೆ ಉಡಿ ತುಂಬುವ, ನೈವೇಧ್ಯ ಅರ್ಪಣೆ ನಡೆದ ಬಳಿಕ 8 ಗಂಟೆಗೆ ಟ್ಯಾಕ್ಟರ್ ರಿವರ್ಸ ಸ್ಪರ್ಧೆ, 11 ಗಂಟೆಗೆ ತೆರೆಬಂಡಿ ಸ್ಪರ್ಧೆ ನಡೆಯಲಿದ್ದು, ಸಾಯಂಕಾಲ 6 ಗಂಟೆಗೆ ದೇವಿಯ ಮೂರ್ತಿಯನ್ನು ಉದ್ದಮ್ಮಾ ಗುಡಿಯಿಂದ ಅಂಬೇಡ್ಕರ ವೃತ್ತಕ್ಕೆ ತಂದು ಕೂಡ್ರಿಸುವದು. ರಾತ್ರಿ 10 ಗಂಟೆಗೆ ದ್ಯಾಮವ್ವದೇವಿ ನಾಟ್ಯ ಸಂಘದವರಿಂದ ಪ್ರಾಣ ಹೋದರೂ ಮಾನಬೇಕು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಆ.9 ರಂದು ಮುಂಜಾನೆ 8 ಗಂಟೆಗೆ ದೇವಿಗೆ ಉಡಿ ತುಂಬುವ, ನೈವೇಧ್ಯ ಅರ್ಪಣೆ ಜರುಗಿದ ನಂತರ ಮುಂಜಾನೆ 10 ಗಂಟೆಗೆ ನಿಮಿಷದ ಬಂಡಿ ಶರ್ತು, ಸಾಯಂಕಾಲ 6 ಗಂಟೆಗೆ ದೇವಿಯ ಮೂರ್ತಿಯನ್ನು ಅಂಬೇಡ್ಕರ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಲಕ್ಷ್ಮೀದೇವಿ ದೇವಸ್ಥಾನಕ್ಕೆ ತಂದು ಕೂಡ್ರಿಸುವದು. ರಾತ್ರಿ 8 ಗಂಟೆಗೆ ಸ್ಥಳೀಯ ಗಜಾನನ ವೇದಿಕೆ ಮೇಲೆ ದೂರದರ್ಶನ ಕಲಾವಿದ ಅಜಯ ಸಾರಾಪೂರೆ ಅವರಿಂದ ನಗೆ ಹಬ್ಬ, ಝೀ ವಾಹಿನಿ ಕಲಾವಿದೆ ಘೋಡಗೇರಿಯ ಕುಮಾರಿ ಲಕ್ಷ್ಮ ತಳವಾರ ಅವರಿಂದ ಸಂಗೀತ ಕಾರ್ಯಕ್ರಮ, ಮಮದಾಪೂರದ ಲಕ್ಷ್ಮೀ ಒಡೆಯರ ತಂಡದವರಿಂದ ಭರತನಾಟ್ಯ, ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಆ.10 ರಂದು 10 ಗಂಟೆಗೆ ಸತ್ಕಾರ ಸಮಾರಂಭ ನಡೆಯಲಿದ್ದು, ಮುಗಳಖೋಡದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ, ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ. ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ, ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸತ್ಕಾರ ಮೂರ್ತಿಗಳಾಗಿ ಆಗಮಿಸಲಿದ್ದಾರೆ.
ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಸಂತ ಶರಣರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಜಾತ್ರಾ ಮಹೋತ್ಸವಕ್ಕೆ ತನು,ಮನ, ಧನ ಸಹಾಯ, ಸಹಕಾರ ನೀಡಿದ ಗಣ್ಯರಿಗೆ, ದಾನಿಗಳಿಗೆ ಜಾತ್ರಾಮಹೋತ್ಸವ ಸಮಿತಿ ವತಿಯಿಂದ ಸತ್ಕಾರ ನಡೆಯಲಿದೆ. ಈ ದಿನ ಭಂಡಾರ ಆಡುವದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಮದ್ಯಾಹ್ನ 12 ಗಂಟೆಗೆ ಪುರಜನರಿಂದ ಶ್ರೀ ದೇವಿಗೆ ಉಡಿ ತುಂಬುವ, ನೈವೇಧ್ಯ ಅರ್ಪಣೆ ಕಾರ್ಯಕ್ರಮ ನಡೆದು, ರಾತ್ರಿ ಶ್ರೀ ದೇವಿಯನ್ನು ಸೀಮೆಗೆ ಕಳುಹಿಸುವ ಮೂಲಕ ಪ್ರಸಕ್ತ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಪ್ರತಿದಿನ ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸ್ಪರ್ಧೆಯಲ್ಲಿ ಹೆಸರು ನೊಂದಾಯಿಸಲು, ವಿವರಗಳಿಗೆ ಮೊ.ನಂ- 9880850851, 9535278959, 9980705123 ಸಂಪರ್ಕಿಸಬೇಕೆಂದು ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿಯ ಜಾತ್ರಾಮಹೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.