ಗೋಕಾಕ:ಹಿಡಕಲ್ ಜಲಾಶಯದಿಂದ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರ ಮನವಿ

ಹಿಡಕಲ್ ಜಲಾಶಯದಿಂದ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರೈತರ ಮನವಿ
ಗೋಕಾಕ ಜೂ 26 : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂಗಳವಾರ ಸಂಜೆ ಮನವಿ ಪತ್ರ ಸಲ್ಲಿಸಿದರು.
ರೈತರ ಅನುಕೂಲಕ್ಕಾಗಿ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಅಗತ್ಯವಾಗಿದೆ. ಕೂಡಲೇ ಘಟಪ್ರಭಾ ಕಾಲುವೆಗಳಿಗೆ ನೀರು ಹರಿಸಬೇಕು. ಜೊತೆಗೆ ಅರಭಾವಿ ಮತಕ್ಷೇತ್ರದ ಕೆಲವು ಹಳ್ಳಿಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಬಯಲು ಮುಕ್ತ ಶೌಚಾಲಯಗಳನ್ನು ನಿರ್ಮಿಸಿಕೊಡುವಂತೆ ರೈತ ಸಂಘಟನೆಗಳು ಶಾಸಕರನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ, ಪ್ರಾದೇಶಿಕ ಆಯುಕ್ತ ಮೇಘನ್ನವರ ಮತ್ತು ಜಿಲ್ಲಾಧಿಕಾರಿ ಜಿಯಾವುಲ್ಲಾ ಅವರಲ್ಲಿ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ. ಇನ್ನೆರಡು ದಿನಗಳೊಳಗಾಗಿ ರೈತರ ಹಿತದೃಷ್ಟಿಯಿಂದ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಗಣಪತಿ ಈಳಿಗೇರ, ಕಾರ್ಯಾಧ್ಯಕ್ಷ ಭೀಮಶಿ ಗದಾಡಿ, ಜಿಲ್ಲಾ ಸಂಚಾಲಕರಾದ ಮುತ್ತೆಪ್ಪ ಕುರುಬರ, ಮಲ್ಲಿಕಾರ್ಜುನ ಈಳಿಗೇರ, ದೇವೇಂದ್ರ ಮಕ್ಷರ, ಅಶೋಕ ಮಡಿವಾಳರ, ತಾಲೂಕಾ ಅಧ್ಯಕ್ಷ ಮುತ್ತೆಪ್ಪ ಬಾಗನ್ನವರ, ರೈತ ಸಂಘಟನೆಗಳ ಪದಾಧಿಕಾರಿಗಳಾದ ಬಸವರಾಜ ಮಾಕನ್ನವರ, ಶಿವಾನಂದ ಈಳಿಗೇರ, ಮಹಾಂತೇಶ ಖಾನಟ್ಟಿ, ಮಹಾನಂದಾ ಹಿರೇಮಠ, ಸುನಿತಾ ಕದಂ, ನಿರ್ಮಲಾ ಶಿಂಧಿಕುರಬೇಟ, ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.