RNI NO. KARKAN/2006/27779|Tuesday, May 21, 2024
You are here: Home » breaking news » ಘಟಪ್ರಭಾ:ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಘಟಪ್ರಭಾ ಸಕ್ಕರೆ ಕಾರ್ಖಾನೆ ದಾಖಲೆ ಬರೆದಿದೆ: ಶಾಸಕ ಬಾಲಚಂದ್ರ

ಘಟಪ್ರಭಾ:ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಘಟಪ್ರಭಾ ಸಕ್ಕರೆ ಕಾರ್ಖಾನೆ ದಾಖಲೆ ಬರೆದಿದೆ: ಶಾಸಕ ಬಾಲಚಂದ್ರ 

ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಘಟಪ್ರಭಾ ಸಕ್ಕರೆ ಕಾರ್ಖಾನೆ ದಾಖಲೆ ಬರೆದಿದೆ: ಶಾಸಕ ಬಾಲಚಂದ್ರ
ಘಟಪ್ರಭಾ ಫೆ 27 : ರೈತರ ಏಳ್ಗೆಗಾಗಿಯೇ ಹುಟ್ಟಿಕೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ.ಗಳನ್ನು ನೀಡಿದ್ದು, ರಾಜ್ಯದ ಯಾವೊಂದು ಕಾರ್ಖಾನೆಗಳು ಇಷ್ಟು ದರವನ್ನು ನೀಡಿಲ್ಲ. ಆದರೆ ನಮ್ಮ ಕಾರ್ಖಾನೆ ಮಾತ್ರ ಸಕ್ಕರೆ ದರ ಕುಸಿತದ ಮಧ್ಯೆಯೂ ಅತ್ಯಧಿಕ ದರ ನೀಡಿ ಸಕ್ಕರೆ ಕಾರ್ಖಾನೆ ಇತಿಹಾಸದಲ್ಲಿ ದಾಖಲೆ ಬರೆದಿದ್ದು, ರೈತರೆಲ್ಲ ಹೆಮ್ಮೆ ಪಡುವ ಸಂಗತಿ ಎಂದು ಶಾಸಕ ಹಾಗೂ ಕಾರ್ಖಾನೆಯ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಮಂಗಳವಾರದಂದು 2017-18ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರೈತರನ್ನು ಉದ್ಧೇಶಿಸಿ ಅವರು ಮಾತನಾಡಿದರು.
ನಮ್ಮ ಕಾರ್ಖಾನೆಗೆ ಇತರೇ ಕಾರ್ಖಾನೆಗಳಿಗಿಂತ ಯಾವುದೇ ಇನ್ನೀತರ ಉತ್ಪನ್ನಗಳಿಲ್ಲ. ಆದರೂ ರೈತರ ಹಿತಕ್ಕಾಗಿ ಕಾರ್ಖಾನೆಗೆ ಹಾನಿಯಾದರೂ ನಾವು 3 ಸಾವಿರ ರೂ.ಗಳಂತೆ ರೈತರ ಖಾತೆಗಳಿಗೆ ಹಣವನ್ನು ಜಮಾ ಮಾಡಿದ್ದೇವೆ. ಆದರೆ ಉಳಿದ ಕಾರ್ಖಾನೆಗಳು ಕೇವಲ 2500 ರಿಂದ 2700 ವರೆಗೆ ಮಾತ್ರ ರೈತರಿಗೆ ಬಿಲ್ ಸಂದಾಯ ಮಾಡಿವೆ. ಎಲ್ಲ ಕಾರ್ಖಾನೆಗಳಿಗಿಂತ ನಮ್ಮ ಕಾರ್ಖಾನೆಯು ಮಾರುಕಟ್ಟೆಯಲ್ಲಿ ಸಕ್ಕರೆ ದರದ ಲಾಭ-ನಷ್ಟವನ್ನು ಲೆಕ್ಕಿಸದೇ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ. ನೀಡುತ್ತೇವೆಂದು ಘೋಷಿಸಿ ಅದರಂತೆ ನಡೆದುಕೊಂಡಿದ್ದೇವೆ. ಕಾರ್ಖಾನೆಗೆ ಹಾನಿಯಾಗುತ್ತಿದ್ದರೂ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ರೈತರ ಸಹಕಾರದಿಂದ ಇಲ್ಲಿಯವರೆಗೆ 3.15 ಲಕ್ಷ ಮೆ.ಟನ್ ಕಬ್ಬು ನುರಿಸಿದ್ದು, 3.25 ಲಕ್ಷ ಕ್ವಿಂಟಲ್ ಸಕ್ಕರೆಯನ್ನು ಉತ್ಪಾದಿಸಿದೆ ಎಂದು ಹೇಳಿದರು.
78.81 ಕೋಟಿ ರೂ. ಬಿಲ್ ಸಂದಾಯ : ಕಳೆದ 2017ರ ಸೆ.1 ರಿಂದ ಆರಂಭಗೊಂಡ ಕಾರ್ಖಾನೆಯು ಅಲ್ಲಿಂದ ಜನೇವರಿ 25 ರವರೆಗೆ 3 ಸಾವಿರ ರೂ.ಗಳಂತೆ 78.81 ಕೋಟಿ ರೂ.ಗಳನ್ನು ರೈತರಿಗೆ ಸಂದಾಯ ಮಾಡಲಾಗಿದೆ. ಟಿಆರ್ ಮತ್ತು ಎಚ್‍ಆರ್‍ಗೆ 17.98 ಕೋಟಿ ರೂ.ಗಳನ್ನು ಹಂಗಾಮಿನಲ್ಲಿ ಪೂರ್ತಿಯಾಗಿ ಚುಕ್ತಾ ಮಾಡಲಾಗಿದೆ. ಫೆ.1 ರಿಂದ ಇಲ್ಲಿಯವರೆಗೆ ಕಬ್ಬು ಪೂರೈಸಿದ ರೈತರ ಬಿಲ್ಲು ಸುಮಾರು 10 ಕೋಟಿ ರೂ. ಬಾಕಿ ಇದ್ದು, ಅದನ್ನು ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
5 ಲಕ್ಷ ಟನ್ ಕಬ್ಬು ನುರಿಸುವ ಗುರಿ : ಮುಂದಿನ ಹಂಗಾಮಿನಲ್ಲಿ ರೈತರ ಬೆಂಬಲದಿಂದ 5 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಈ ಬಾರಿಯೂ ನಮ್ಮ ಕಾರ್ಖಾನೆಗೆ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಅಭ್ಯುದಯಕ್ಕೆ ಕಬ್ಬು ಬೆಳೆಗಾರರು ಕೈಜೋಡಿಸುವಂತೆ ಮನವಿ ಮಾಡಿಕೊಂಡರು.
ನಮ್ಮ ಕಾರ್ಖಾನೆ ಸ್ಥಾಪನೆಯಾದಾಗಿನಿಂದಲೂ ಅರಭಾವಿ ದುರದುಂಡೇಶ್ವರ ಮಠದ ಕೃಪೆ ಇದ್ದು, ಎಷ್ಟೇ ಕಷ್ಟಗಳು ಎದುರಾಗಿದ್ದರೂ ರೈತರ ಸಹಕಾರದಿಂದ ಅವುಗಳನ್ನು ಎದುರಿಸಿ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಆಡಳಿತ ಮಂಡಳಿ, ರೈತರು, ಸಾರಿಗೆ ಮತ್ತು ಕಬ್ಬು ಮುಕ್ತೆದಾರರು, ಕಾರ್ಮಿಕರು, ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಕಾರ್ಖಾನೆ ಪ್ರಗತಿಯತ್ತ ಸಾಗುತ್ತಿದ್ದು, ಸಹಕರಿಸಿದ, ಪ್ರೋತ್ಸಾಹಿಸಿದ ಎಲ್ಲರನ್ನು ಅಭಿನಂದಿಸುವುದಾಗಿ ಶಾಸಕರು ಹೇಳಿದರು.
ರೈತರ ಬೃಹತ್ ಸಮಾವೇಶ : ಹನಿ ನೀರಾವರಿ ಹಾಗೂ 4 ಅಡಿ ಸಾಲಿನ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಚುನಾವಣೆ ಮುಗಿದ ಬಳಿಕ ಗೋಕಾಕ ತಾಲೂಕಾ ಮಟ್ಟದ ರೈತರ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗುವುದು. ಈ ಸಮಾವೇಶಕ್ಕೆ ಕೃಷಿ ಪಂಡಿತರನ್ನು ಆಹ್ವಾನಿಸಿ ರೈತರಿಗೆ ಉಪಯುಕ್ತ ಸಲಹೆಗಳನ್ನು ಕೊಡಿಸುವುದಾಗಿ ಹೇಳಿದರು.
ಸತ್ಕಾರ : ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಪೂರೈಕೆ ಮಾಡಿದ ಕಲ್ಲೋಳಿಯ ಬಸವಂತ ಬಾಳಪ್ಪ ದಾಸನವರ, ಮೆಳವಂಕಿಯ ಪ್ರಲ್ಹಾದ ಸುಣಧೋಳಿ, ಉದಗಟ್ಟಿಯ ಮಲಕಾರೆಪ್ಪ ಭೀಮಪ್ಪ ವಡೇರ ಹಾಗೂ ಕಳ್ಳಿಗುದ್ದಿಯ ರಾಮಪ್ಪ ಕೃಷ್ಣಪ್ಪ ಮಹಾರಡ್ಡಿ, ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಸಾರಿಗೆ ಹಾಗೂ ಕಬ್ಬು ಕಟಾವು ಮಾಡಿದ ಮಕ್ತೆದಾರರಾದ ಫಾಮಲದಿನ್ನಿಯ ಬಾಳಪ್ಪ ಭೀಮಪ್ಪ ಪೂಜೇರಿ, ಗಣೇಶವಾಡಿಯ ಯಲ್ಲಪ್ಪ ನಿಂಗಪ್ಪ ಮೂಲಿಮನಿ, ನಾಗನೂರಿನ ಭೀಮಪ್ಪ ರಾಮಪ್ಪ ಕಿತ್ತೂರ ಅವರನ್ನು ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.
ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು.
ಯುವ ಧುರೀಣ ಸಂತೋಷ ರಮೇಶ ಜಾರಕಿಹೊಳಿ, ಕಾರ್ಖಾನೆಯ ಉಪಾಧ್ಯಕ್ಷ ರಾಮಣ್ಣಾ ಮಹಾರಡ್ಡಿ, ನಿರ್ದೇಶಕರಾದ ಬಸಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಶಿವಲಿಂಗ ಪೂಜೇರಿ, ಲಕ್ಷ್ಮಣ ಗಣಪ್ಪಗೋಳ, ಕೃಷ್ಣಪ್ಪ ಬಂಡ್ರೊಳ್ಳಿ, ರಾಮಣ್ಣಾ ಬಂಡಿ, ಕಾರ್ಖಾನೆಯ ಹಿತಚಿಂತಕರಾದ ವಿಕ್ರಮ ಅಂಗಡಿ, ಬಸವರಾಜ ಕಲ್ಯಾಣಶೆಟ್ಟಿ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ರಂಜನಗಿ ಉಪಸ್ಥಿತರಿದ್ದರು. ಸಿಡಿಓ ಜೆ.ಆರ್. ಬಬಲೇಶ್ವರ ಸ್ವಾಗತಿಸಿದರು.

Related posts: