RNI NO. KARKAN/2006/27779|Thursday, April 18, 2024
You are here: Home » breaking news » ಗೋಕಾಕ:ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ನಾಳೆ ಸಭೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ನಾಳೆ ಸಭೆ : ಮುರುಘರಾಜೇಂದ್ರ ಶ್ರೀ 

ಗೋಕಾಕ ನೂತನ ಜಿಲ್ಲೆಗೆ ಆಗ್ರಹಿಸಿ ನಾಳೆ ಸಭೆ : ಮುರುಘರಾಜೇಂದ್ರ ಶ್ರೀ

ಗೋಕಾಕ ಫೆ 6: ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ರಚಿಸಲು ಸರ್ಕಾರವನ್ನು ಒತ್ತಾಯಪಡಿಸಲು ಬುಧವಾರ ದಿ. 7 ರಂದು ಮ. 12.30 ಗಂಟೆಗೆ ಇಲ್ಲಿಯ ಶೂನ್ಯ ಸಂಪಾದನ ಮಠದಲ್ಲಿ ತಾಲೂಕಿನ ಎಲ್ಲ ಜನಪ್ರತಿನಿಧಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ ಎಂದು ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮೀತಿಯ ನೇತೃತ್ವ ವಹಿಸಿಕೊಂಡಿರುವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರ ಸಂಜೆ ಶೂನ್ಯ ಸಂಪಾದನ ಮಠದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಎಲ್ಲ ದೃಷ್ಟಿಯಿಂದಲೂ ಗೋಕಾಕ ಜಿಲ್ಲೆಯಾಗಲು ಯೋಗ್ಯವಿದೆ. ಹಿಂದಿನ ಎಲ್ಲ ಆಯೋಗಗಳು ಗೋಕಾಕನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದವು ಎಂದು ಹೇಳಿದರು.
ಕಳೆದ ಎರಡು ದಶಕಗಳಿಂದ ಗೋಕಾಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಲೇ ಇದೆ. ಜಿಲ್ಲೆಗಾಗಿ ತಾಲೂಕಿನ ಎಲ್ಲ ಮಹಾಜನತೆಯ ಬೆಂಬಲ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಬುಧವಾರದಂದು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು.
ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾಳಿನ ಸಭೆಯಲ್ಲಿ ತಾಲೂಕಿನ ಎಲ್ಲ ಮುಖಂಡರುಗಳು ಹಾಗೂ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಸದಸ್ಯರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಭಾಗಿಯಾಗಲಿದ್ದಾರೆ. ವಕೀಲರ ಸಂಘ, ವರ್ತಕರ ಸಂಘ ಸೇರಿದಂತೆ ಸಮಸ್ತ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಜಿಲ್ಲೆ ರಚನೆ ಸಂಬಂಧ ಹೋರಾಟದ ರೂಪು-ರೇಷೆಗಳನ್ನು ಹಾಕಿಕೊಳ್ಳಲಾಗುವುದು. ಗೋಕಾಕ ಜಿಲ್ಲೆಯಾಗುವುದರಿಂದ ಬೆಳಗಾವಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಬೆಳಗಾವಿ ಜಿಲ್ಲೆಯು ದೊಡ್ಡದಾಗಿರುವುದರಿಂದ ವಿಭಜನೆ ಅವಶ್ಯವಾಗಿದೆ. ಆದ್ದರಿಂದ ನಾಳೆ ನಡೆಯಲಿರುವ ಸಭೆಯಲ್ಲಿ ಎಲ್ಲರೂ ಭಾಗಿಯಾಗಿ ಸಭೆಯಲ್ಲಿ ಅಗತ್ಯವಿರುವ ಸಲಹೆ ನೀಡುವಂತೆ ಕೋರಿದ್ದಾರೆ. ಗೋಕಾಕ ಜಿಲ್ಲೆ ರಚನೆಗಾಗಿ ಎಂತಹ ಹೋರಾಟಕ್ಕೂ ಸಿದ್ಧರಿದ್ದೇವೆ. ಗೋಕಾಕನ್ನು ಜಿಲ್ಲೆಯನ್ನಾಗಿಸುವುದೊಂದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಮಾಜಿ ನಗರಾಧ್ಯಕ್ಷ ಎಸ್.ಎ. ಕೋತವಾಲ, ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ. ಹುಕ್ಕೇರಿ, ಸದಸ್ಯರಾದ ಪರಶುರಾಮ ಭಗತ, ಅಬ್ಬಾಸ ದೇಸಾಯಿ, ಚಂದ್ರಕಾಂತ ಇಳಿಗೇರ, ಜಯಾನಂದ ಹುಣಶ್ಯಾಳ, ಗಿರೀಶ ಖೋತ, ಬಿಳ್ಳೂರ, ವಕೀಲರ ಸಂಘದ ಪದಾಧಿಕಾರಿಗಳು, ನಿಯೋಜಿತ ಜಿಲ್ಲಾ ಹೋರಾಟ ಸಮೀತಿ ಸದಸ್ಯರು ಸುದ್ಧಿಗೋಷ್ಠಿಯಲ್ಲಿದ್ದರು.

Related posts: