ಮೂಡಲಗಿ: ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಬಾಲಚಂದ್ರ
ಮೂಡಲಗಿ ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಬಾಲಚಂದ್ರ
ಮೂಡಲಗಿ ಜ 31 : ಮೂಡಲಗಿ ಭಾಗದ ಜನತೆಗೆ ಮಾತುಕೊಟ್ಟಂತೆ ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಇದನ್ನು ಮಹಾಜನತೆ ಎಂದಿಗೂ ಮರೆಯಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮಂಗಳವಾರ ರಾತ್ರಿ ಇಲ್ಲಿಯ ಬಸವ ಮಂಟಪದಲ್ಲಿ ಮೂಡಲಗಿ ಹೊಸ ತಾಲೂಕು ಕಾರ್ಯಾರಂಭದ ನಿಮಿತ್ಯ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಡಲಗಿ ಹೊಸ ತಾಲೂಕು ಆರಂಭವಾಗಿರುವುದರಿಂದ ಹಲವು ವರ್ಷಗಳ ಜನತೆಯ ಬೇಡಿಕೆ ಈಡೇರಿದಂತಾಗಿದೆ ಎಂದರು.
ಮೂಡಲಗಿ ಹೊಸ ತಾಲೂಕಿಗೆ ಹೋಬಳಿ ಕೇಂದ್ರಸ್ಥಾನವಿಲ್ಲದ್ದರಿಂದ ತಾತ್ಕಾಲಿಕವಾಗಿ ಅರಭಾವಿ ಪಟ್ಟಣ ಪಂಚಾಯತಿಯನ್ನು ಸೇರಿಸಲಾಗಿದ್ದು, ಮೂಡಲಗಿ ಸೇರಿ ಒಟ್ಟು 48 ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಶ್ರಮಿಸಲಾಗುವುದು. ಶ್ರೀಪಾದಬೋಧ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಾದರಿ ತಾಲೂಕನ್ನಾಗಿ ರೂಪಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ತಾಲೂಕು ರಚನೆಯ 34 ದಿನದ ಹೋರಾಟದಲ್ಲಿ ಕೆಲವರು ಪ್ರಾಮಾಣಿಕ ಹೋರಾಟ ನಡೆಸಿದ್ದಾರೆ. ಇನ್ನೂ ಕೆಲವರು ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಬಣ್ಣ ಎರಚುವ ಕೆಲಸ ಮಾಡುತ್ತ ನನ್ನನ್ನು ನಿಂದಿಸಿದ್ದಾರೆ. ಕೆಟ್ಟ ಪದಗಳಿಂದ ಅಮಾನವೀಯವಾಗಿ ವರ್ತಿಸಿದ್ದಾರೆ. ಅವರ ಕೀಳುಮಟ್ಟದ ರಾಜಕಾರಣದಿಂದ ನನ್ನ ಮನಸಿನ ಮೇಲೆ ಪರಿಣಾಮಬೀರಿದೆ. ಮಾತನಾಡುವುದಕ್ಕೂ ಒಂದು ಮಿತಿ ಇದೆ ಎಂದರು.
ತಾಲೂಕಾ ಹೋರಾಟದಲ್ಲಿ ಪ್ರಭಾಶುಗರ ಬಗ್ಗೆ ಕೆಲವರು ಮಾತನಾಡಿದ್ದಾರೆ. ಕಾರ್ಖಾನೆ ದಿವಾಳಿ ಮಾಡಿದ್ದಾರೆಂದು ದೂರಿದ್ದಾರೆ. ಒಂದು ವೇಳೆ ಕಾರ್ಖಾನೆ ಹಾಳು ಮಾಡಿದ್ದರೆ ರಾಜ್ಯದಲ್ಲಿಯೇ ಅತ್ಯಧಿಕ ಪ್ರ.ಟ.ಕಬ್ಬಿಗೆ 3000 ರೂ. ನೀಡುತ್ತಿರಲಿಲ್ಲ. ಯಾವ ಕಾರ್ಖಾನೆಗಳು ಇಷ್ಟು ಹಣ ರೈತರಿಗೆ ನೀಡುತ್ತಿಲ್ಲ. ಈಗಾಗಲೇ ಜನೇವರಿ 15 ರವರೆಗೆ ಬಿಲ್ಲನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಅರಭಾವಿಯಿಂದಲೇ ಸ್ಪರ್ಧೆ : ಎಪ್ರೀಲ್-ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ ಅವರು, ಲಕ್ಷ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಬಾಲಚಂದ್ರ ಜಾರಕಿಹೊಳಿ : “ತಾಲೂಕು ಹೋರಾಟದ ಸಂದರ್ಭದಲ್ಲಿ ನನ್ನ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಕೆ ಮಾಡಿ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ 8 ಜನರ ವಿರುದ್ಧ 24 ಕೋಟಿ ರೂ.ಗಳ ಮಾನನಷ್ಟ ಮೊಕದ್ಧಮೆಯನ್ನು 15 ದಿನಗಳೊಳಗೆ ಗೋಕಾಕ ನ್ಯಾಯಾಯದಲ್ಲಿ ಹೂಡುತ್ತೇನೆ. ಪ್ರಜಾಪ್ರಭುತ್ವದಲ್ಲಿ ಅವರಿಗೆ ಮಾತನಾಡುವ ಹಕ್ಕು ಎಷ್ಟಿದೆಯೋ ನನಗೂ ಕೂಡ ಕಾನೂನಿನಲ್ಲಿ ಮೊಕದ್ಧಮೆ ದಾಖಲಿಸಲು ಹಕ್ಕು ಇದೆ. ನನ್ನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತಂದಿರುವವರ ವಿರುದ್ಧ ಕಾನೂನಿನ ಮೂಲಕ ಉತ್ತರಿಸುತ್ತೇನೆ “

ಮೂಡಲಗಿ ಹೊಸ ತಾಲೂಕಿನ ರೂವಾರಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಪಾದಬೋಧ ಸ್ವಾಮೀಜಿಯವರು ವಿಶೇಷವಾಗಿ ಸತ್ಕರಿಸಿದರು.
ಶ್ರೀಪಾದಬೋಧ ಸ್ವಾಮೀಜಿಯವರು ಮಾತನಾಡಿ, 1974 ರಿಂದ ಮೂಡಲಗಿ ಭಾಗದ ಜನರು ತಾಲೂಕು ಸಂಬಂಧ ಹೋರಾಟ ನಡೆಸಿಕೊಂಡು ಬಂದಿದ್ದರು. ಆದರೇ ಈ ಹೋರಾಟದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರೇ ಝೇಂಡಾ ಹಾರಿಸಿ ಮೂಡಲಗಿ ತಾಲೂಕಿನ ರೂವಾರಿ ಎನಿಸಿದರು. ವಿರೋಧಿಗಳು ಇದ್ದಾಗಲೇ ಅಭಿವೃದ್ಧಿ ಕೆಲಸಗಳು ಆಗುತ್ತವೆ. ರಾಜಕೀಯದಲ್ಲಿ ವಿರೋಧಿಗಳು ಇರಲೇಬೇಕು. ವಿರೋಧಿಗಳನ್ನು ಶತ್ರುಗಳಂತೆ ತಿಳಿದುಕೊಳ್ಳದೇ ಅವರನ್ನು ಸ್ನೇಹಿತರಂತೆ ನೋಡಬೇಕು. ಆ ಗುಣ ಬಾಲಚಂದ್ರ ಅವರಲ್ಲಿದೆ. 34 ದಿನಗಳ ಹೋರಾಟದಲ್ಲಿ ಕೆಲ ಹೋರಾಟಗಾರರ ಮಾತಿನಲ್ಲಿ ಮಿತಿ ಇರಬೇಕಾಗಿತ್ತು. ಅತೀಯಾಗಬಾರದಾಗಿತ್ತು ಎಂದು ಖೇದ ವ್ಯಕ್ತಪಡಿಸಿದ ಅವರು, ಮೂಡಲಗಿ ರಾಜ್ಯದಲ್ಲಿಯೇ ಆದರ್ಶ ತಾಲೂಕು ಆಗಲಿ. ಈ ದಿಸೆಯಲ್ಲಿ ಎಲ್ಲರೂ ಒಂದಾಗಿ ಅಭಿವೃದ್ಧಿಗಾಗಿ ಕೈ ಜೋಡಿಸುವಂತೆ ಸಲಹೆ ಮಾಡಿದರು.
ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿಂಗಪ್ಪ ಫಿರೋಜಿ, ವೀರಣ್ಣಾ ಹೊಸೂರ, ರವಿ ಸೋನವಾಲ್ಕರ, ಡಿ.ಬಿ. ಪಾಟೀಲ, ರಾಮಣ್ಣಾ ಹಂದಿಗುಂದ, ಜಿಪಂ ಸದಸ್ಯರಾದ ಗೋವಿಂದ ಕೊಪ್ಪದ, ವಾಸಂತಿ ತೇರದಾಳ, ಮುಖಂಡರಾದ ರವಿ ಸಣ್ಣಕ್ಕಿ, ಅಜೀಜ ಡಾಂಗೆ, ಅಪ್ಪಾಸಾಹೇಬ ಹೊಸಕೋಟಿ, ಬಸವಪ್ರಭು ನಿಡಗುಂದಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ತಹಶೀಲ್ದಾರ ಜಿ.ಎಸ್. ಮಳಗಿ, ಉಪತಹಶೀಲ್ದಾರ ಲಕ್ಷ್ಮಣ ಭೋವಿ, ತಾಪಂ ಸದಸ್ಯರು, ಪುರಸಭೆ ಸದಸ್ಯರು, ಸಹಕಾರಿಗಳು, ಅಧಿಕಾರಿಗಳು, ಮೂಡಲಗಿ ಭಾಗದ ಹಲವು ಮುಖಂಡರುಗಳು ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನ ಶ್ರೀಪಾದಬೋಧ ಸ್ವಾಮೀಜಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಶಿವಬೋಧರಂಗ ಮಠದಿಂದ ತೆರೆದ ವಾಹನದಲ್ಲಿ ಪುರಸಭೆ ಕಾರ್ಯಾಲಯದವರೆಗೆ ಭವ್ಯ ಮೆರವಣಿಗೆಯಲ್ಲಿ ವಿವಿಧ ವಾಧ್ಯವೃಂದಗಳೊಂದಿಗೆ ಕರೆತರಲಾಯಿತು. ನಂತರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ಹೊಸ ತಾಲೂಕು ಕಾರ್ಯಾರಂಭದ ಪ್ರಯುಕ್ತ ತಹಶೀಲ್ದಾರ ಕಛೇರಿಯನ್ನು ಉದ್ಘಾಟಿಸಿದರು.
ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಅವಿರತವಾಗಿ ಪ್ರಯತ್ನಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶ್ರೀಪಾದಬೋಧ ಸ್ವಾಮೀಜಿಯವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಶಾಸಕರಿಗೆ ಸತ್ಕರಿಸಿದರು.