ಗೋಕಾಕ:ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ : ಶಾಸಕ ಬಾಲಚಂದ್ರ
ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ : ಶಾಸಕ ಬಾಲಚಂದ್ರ
ಗೋಕಾಕ ಡಿ 24 : ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ. ಎಲ್ಲ ಮನುಕುಲದವರು ಒಂದೇ ಎಂಬ ಉದಾತ್ತ ಮನೋಭಾವನೆ ಉಂಟಾದಾಗ ಮಾತ್ರ ಇಡೀ ಪ್ರಪಂಚವು ಸುಂದರವಾಗಿ ಕಾಣುತ್ತದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ತಾಲೂಕಾ ಕ್ರೈಸ್ತ ಸಮುದಾಯ ಟ್ರಸ್ಟ್ ಏರ್ಪಡಿಸಿದ್ದ ಕ್ರಿಸಮಸ್ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಪ್ರಪಂಚವು ಸುಂದರವಾಗಿ ಕಂಡಾಗ ಮಾತ್ರ ಪ್ರತಿ ಮನುಕುಲವು ದೈವ ಸ್ವರೂಪಿಯಾಗುತ್ತದೆ ಎಂದು ಹೇಳಿದರು.
ಏಸು ಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ವ್ಯವಸ್ಥಿತ ರೂಪುರೇಷೆ ಕ್ರೈಸ್ತ ತತ್ವಗಳ ಬಗ್ಗೆ ಬದ್ಧತೆ ಮುಂತಾದ ಕಾರಣಗಳಿಂದ ಕ್ರೈಸ್ತ ಧರ್ಮವು ಪ್ರಪಂಚದಾದ್ಯಂತ ಪಸರಿಸಿದೆ. ನಿನ್ನ ನೆರೆ-ಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ ಆತ್ಮದಿಂದ ಹಾಗೂ ಸತ್ಯದಿಂದ ಆರಾಧಿಸುವ ಏಸು ಕ್ರಿಸ್ತನ ತತ್ವಾದರ್ಶಗಳು ಪ್ರಸ್ತುತವಾಗಿವೆ ಎಂದು ಹೇಳಿದರು.
ಪ್ರಪಂಚವು ಜಾತಿ-ಮತ-ಪಂಥಗಳ ಬೇಧವಿಲ್ಲದೆ ಆಚರಿಸುವ ಕ್ರಿಸಮಸ್ ಹಬ್ಬವಾಗಿದೆ. ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶವು ಪ್ರತಿ ದಿನವು ಹಬ್ಬವಾಗಿ ಮಾರ್ಪಡಾಗಲಿ ಎಂದು ಹಾರೈಸಿದರು.
ಕ್ರಿಸಮಸ್ ಹಬ್ಬದ ಪ್ರಯುಕ್ತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೇಕ್ ಕತ್ತರಿಸಿ ಸಮಾಜ ಬಾಂಧವರಿಗೆ ಶುಭ ಕೋರಿದರು.
ಟ್ರಸ್ಟ್ ಗೌರವಾಧ್ಯಕ್ಷ ಏಬಿನೇಜರ್ ಕರಬನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇನ್ನೂ ಉನ್ನತ ಅಧಿಕಾರ ಹಾಗೂ ಆಯುರಾರೋಗ್ಯ ಭಾಗ್ಯ ಕಲ್ಪಿಸಲಿ ಎಂದು ಏಸುವಿನಲ್ಲಿ ಪ್ರಾರ್ಥಿಸಿದರು.
ಅಧ್ಯಕ್ಷ ಪ್ರವೀಣ ದಾವಣೆ, ಉಪಾಧ್ಯಕ್ಷ ಸತೀಶ ಹರಿಜನ, ಖಜಾಂಚಿ ಆನಂದ ಬೆಟಗೇರಿ, ಕಾರ್ಯದರ್ಶಿ ಸಂಜೀವ ಚಿಂಚಲಿ, ಸದಸ್ಯರಾದ ಪ್ರಕಾಶ ತಳವಾರ, ಲಕ್ಷ್ಮಣ ಸತ್ತಿಗೇರಿ, ಸಂಜಯ ಸಂಗಮನವರ, ಸಂತೋಷ ದಾವಣೆ, ಜಗದೀಶ ಮಂಡಿ, ಭೀಮಪ್ಪ ಹಣಮಪ್ಪಗೋಳ, ಹನೋಕ ಕಿನ್ನೂರಿ, ಬಾಬು ಹರಿಜನ, ಶಿವರುದ್ರ ಘೋಡಗೇರಿ, ಎಸ್ತೇರ ದಾರಾ, ಡಿಎಸ್‍ಎಸ್ ತಾಲೂಕಾ ಸಂಚಾಲಕ ಲಕ್ಷ್ಮಣ ತೆಳಗಡೆ ಮುಂತಾದವರು ಉಪಸ್ಥಿತರಿದ್ದರು.