RNI NO. KARKAN/2006/27779|Tuesday, October 14, 2025
You are here: Home » breaking news » ಬೆಳಗಾವಿ : ದುಷ್ಕರ್ಮಿಗಳಿಂದ ಕಲ್ಲು ತೂರಾಟ : ಮತ್ತೆ ಸುಟ್ಟು ಕರಕಲಾದ ಬೆಳಗಾವಿ

ಬೆಳಗಾವಿ : ದುಷ್ಕರ್ಮಿಗಳಿಂದ ಕಲ್ಲು ತೂರಾಟ : ಮತ್ತೆ ಸುಟ್ಟು ಕರಕಲಾದ ಬೆಳಗಾವಿ 

ದುಷ್ಕರ್ಮಿಗಳಿಂದ ಕಲ್ಲು ತೂರಾಟ : ಮತ್ತೆ ಸುಟ್ಟು ಕರಕಲಾದ ಬೆಳಗಾವಿ

ಬೆಳಗಾವಿ ಡಿ 19: ನಿನ್ನೆ ರಾತ್ರಿ  ಎರೆಡು ಗುಂಪುಗಳ ಮಧ್ಯ  ನಡೆದ ಗಲಾಟೆಯಿಂದ ಬೆಳಗಾವಿಯ ಪರಿಸ್ಥಿತಿ  ಪ್ರಸ್ತುತ ಬೂದಿ ಮುಚ್ಚಿದ ಕೆಂಡದಂತಾಗಿದೆ

ಧಾರ್ಮಿಕ ಕಾರ್ಯಕ್ರವೊಂದಕ್ಕೆ  ಹಾಕಿದ್ದ ಪೇಂಡಾಲ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದ ಹಿನ್ನಲೆ ಬೆಳಗಾವಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ನಗರದಲ್ಲಿ ರಾತ್ರಿ ಕಲ್ಲು, ಇಟ್ಟಿಗೆ ಮತ್ತು ಸೋಡಾ ಬಾಟಲಿ ತೂರಾಟ ನಡೆದಿದ್ದು, 10 ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ.

ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ 7 ಜನ ಗಾಯಗೊಂಡಿದ್ದಾರೆ. ಮನೆ, ಅಟೋ ಮತ್ತು ಬೈಕ್‌ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ನಗರದಲ್ಲಿ ಶಾಂತಿ ಕದಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. 

ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಬೆಳಗಾವಿಯ ಚವಾಟ ಗಲ್ಲಿ, ದರಬಾರ್‌ಗಲ್ಲಿ, ಖಡಕಗಲ್ಲಿ, ಶೆಟ್ಟಿಗಲ್ಲಿ, ಕಂಜರ್ ಗಲ್ಲಿ, ಜಾಲಗಾರ್ ಗಲ್ಲಿ ಸೇರಿದಂತೆ ನಗರದಲ್ಲಿನ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ಏಕಾಏಕಿ ಎರಡು ಕೋಮಿನ ಗುಂಪುಗಳ ಮಧ್ಯೆ ಕಲ್ಲೂ ತೂರಾಟ ನಡೆದಿದೆ. 

ಈ ಘರ್ಷಣೆಯಲ್ಲಿ ಕಾರು, ಬೈಕ್, ಆಟೋ ಸೇರಿದಂತೆ 20 ಕ್ಕೂ ಅಧಿಕ ವಾಹನಗಳು ಜಖಂಗೊಂಡಿವೆ. ಇಷ್ಟೇ ಅಲ್ಲದೇ ಕೆಲವು ದುಷ್ಕರ್ಮಿಗಳು ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. 

ಪೊಲೀಸರಿಗೆ ಗಾಯ:  

ಗಲಾಟೆಯಲ್ಲಿ ಗಾಯಗೊಂಡಿರುವ ಎಸಿಪಿ ಶಂಕರ್ ಮಾರಿಹಾಳ

ಘಟನೆ ವೇಳೆ ಬೆಳಗಾವಿಯ ಮಾರ್ಕೆಟ್ ವಿಭಾಗದ ಎಸಿಪಿ ಶಂಕರ್ ಮಾರಿಹಾಳ್, ಸಿಪಿಐ ಪ್ರಶಾಂತ್ ಸೇರಿದಂತೆ ಒಟ್ಟು ಐವರು ಪೊಲೀಸರು ಮತ್ತು ಇಬ್ಬರು ಸಾರ್ವಜನಿಕರಿಗೆ ಗಂಭೀರ ಗಾಯವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಐದು ಸುತ್ತು ಅಶ್ರುವಾಯು ಸಿಡಿಸಿ, ಲಘು ಲಾಠಿ ಪ್ರಹಾರ ನಡೆಸಿದ್ದಾರೆ. 

ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಅಂಗಡಿ ಸೇರಿದಂತೆ ನಾಲ್ಕು ವಾಹನಗಳು ಸುಟ್ಟು ಕರಕಲಾಗಿವೆ.   ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸಲಾಗಿದೆ. ಸದ್ಯ ಗಲಭೆ ನಡೆದ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ:
ಇನ್ನು ರಾತ್ರಿ ಸುಮಾರು 10-30ಕ್ಕೆ ಏಕಾಏಕಿ ನಡೆದ ಗಲಾಟೆಯಿಂದ ಕುಂದಾನಗರಿಯ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಗಲಾಟೆ ವೇಳೆ ಪರಸ್ಪರ ಗಾಜಿನ ಬಾಟಲಿ ಮತ್ತು ಕಲ್ಲು ತೂರಾಟ ನಡೆಸಿದ್ದರಿಂದ ಘಟನಾ ಸ್ಥಳದ ರಸ್ತೆಗಳಲ್ಲಿ ಎಲ್ಲಿ ನೋಡಿದ್ರು ಗಾಜಿನ ಚೂರುಗಳೇ ಕಾಣಸಿಗುತ್ತಿವೆ.

ಪೂರ್ವನಿಯೋಜಿತ ಗಲಾಟೆ:
ಇದೊಂದು ಪೂರ್ವನಿಯೋಜಿತ ಗಲಾಟೆ ಎನ್ನಲಾಗುತ್ತಿದೆ. ಹೀಗಾಗಿಯೇ ಗಲಾಟೆ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಗಾಜು-ಕಲ್ಲುಗಳನ್ನ ತೂರಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಐಜಿಪಿ ರಾಮಚಂದ್ರರಾವ್, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಗಲಾಟೆಗೆ ಕಾರಣ ತಿಳಿದು ಬಂದಿಲ್ಲ. ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಶೀಘ್ರ ಗಲಾಟೆಗೆ ಕಾರಣರಾದವರನ್ನ ಬಂಧಿಸುವುದಾಗಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು ಸಾರ್ವಜನಿಕರು ಆತಂಕದಲ್ಲಿ ಬದುಕುವಂತಾಗಿದೆ.   ಗಲೆಭೆಗೆ ಕಾರಣರಾದ 15 ಕ್ಕೂ ಹೆಚ್ಚು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನುಳಿದ ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ.

Related posts: