ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ : ಪೊಲೀಸ ವರಿಷ್ಠಾಧಿಕಾರಿ ಡಾ| ಬಿ.ಆರ್.ರವಿಕಾಂತೇಗೌಡ
ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ : ಪೊಲೀಸ ವರಿಷ್ಠಾಧಿಕಾರಿ ಡಾ| ಬಿ.ಆರ್.ರವಿಕಾಂತೇಗೌಡ
ಘಟಪ್ರಭಾ ಡಿ 10: ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಕೊಡುಗೆ ಅಪಾರವಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ| ಬಿ.ಆರ್.ರವಿಕಾಂತೇಗೌಡ ಹೇಳಿದರು.
ಅವರು ಶನಿವಾರದಂದು ಸಂಜೆ ಸ್ಥಳೀಯ ಶ್ರೀ ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸಾಯಿಟಿಯ ಸಹಕಾರಿ ಮಹರ್ಷಿ ಶ್ರೀ ಬಿ.ಎ.ಪಾಟೀಲ ಆಯುರ್ವೇದಿಕ ಮೆಡಿಕಲ್ ಕಾಲೇಜಿನ 18ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವೈದ್ಯರು ರೋಗಿಯ ಮನಸ್ಸನ್ನು ಗೆಲ್ಲಬೇಕು.
ರೋಗಿಯೇ ದೇವರು ಎಂಬ ಮನೋಭಾವನೆ ವೈದ್ಯರಲ್ಲಿ ಮೂಡಬೇಕು. ಸಮಾಜ ಉತ್ತಮ ಪರಿಸರ, ಸ್ವಚ್ಛ ವಾತಾವರಣ ನೀಡಿದೇ ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ವೈದ್ಯರು ಚಿಂತನೆ ಮಾಡಬೇಕಾದ ಅಗತ್ಯವಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವೈದ್ಯರ ಸೇವೆ ದೊರಬೇಕು.
ಇಂದಿನ ದಿನಮಾನಗಳಲ್ಲಿ ವೈದ್ಯರು ಗ್ರಾಮೀಣ ಪ್ರದೇಶಕ್ಕೆ ಸೇವೆ ಸಲ್ಲಿಸಲು ನಿರಾಕರಿಸುತ್ತಿರುವುದು ಖೇಧಕರ ಸಂಗತಿ. ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮೂಲಕ ಜವಾಬ್ದಾರಿ ಮತ್ತು ಬದ್ಧತೆ ಇರಬೇಕು. ಇವತ್ತು ನಮ್ಮ ಮೇಲೆ ಎಲ್ಲರ ಋಣ ಇದೆ ಅದನ್ನು ತೀರಿಸುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರಲ್ಲದೇ ವೈದ್ಯರಿಗೆ ಸರ್ಕಾರ ಶುಲ್ಕ ನಿಗದಿ ಮಾಡಬಾರದು ಎಂಬ ಕೂಗು ಕಳೆದ ಅಧಿವೇಶನದಲ್ಲಿ ಕಳೆದ 3 ದಿನಗಳವರೆಗೆ ಪ್ರತಿಭಟನೆ ನಡೆಸಿದ್ದರು. ಸರ್ಕಾರ ಶುಲ್ಕ ನಿಗದಿ ಮಾಡುವುದಕಿಂತ ವೈದ್ಯರಿಗೆ ಸಮಾಜವೇ ಶುಲ್ಕ ನಿಗದಿ ಮಾಡಬೇಕು. ವೈದ್ಯಕೀಯ ಕ್ಷೇತ್ರವು ವಾಣಿಜ್ಯಕರಣವಾಗಬಾರದು ಎಂದು ಹೇಳಿದರಲ್ಲದೇ ಆಯುರ್ವೆದದಲ್ಲಿ ರೋಗಿಯ ವಿಶ್ವಾಸ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರು.
ಸಾನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಚೇರಮನ್ ಬಿ.ಆರ್.ಪಾಟೀಲ ಹಾಗೂ ಸಿಇಓ ಡಾ| ಬಿಕೆಎಚ್ ಪಾಟೀಲ ಅವರು ತಮ್ಮ ಆಡಳಿತ ಮಂಡಳಿ ನಿರ್ದೇಶಕರೊಂದಿಗೆ ಹಾಗೂ ಸಿಬ್ಬಂದಿಯೊಂದಿಗೆ ಹೊಂದಿದ ಅಪಾರ ಪ್ರೀತಿ,ವಿಶ್ವಾಸ ಹಾಗೂ ಸತತ ಪರಿಶ್ರಮದಿಂದ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ವ್ಯಕ್ತಿಯಾಗಿದ್ದಾರೆ. ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ದತಿಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೇಡಿಕೆ ಇದೆ. ಪ್ರತಿಯೊಂದು ರೋಗ ನಿವಾರಕ ಶಕ್ತಿ ಆಯುರ್ವೇದಲ್ಲಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಅವಶ್ಯಕತೆ ಇದೆ.
ಅಧ್ಯಕ್ಷತೆಯನ್ನು ಶ್ರೀ ಜೆ.ಜಿ.ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್.ಪಾಟೀಲ(ನಾಗನೂರ) ವಹಿಸಿದ್ದರು. ಅತಿಥಿಯಾಗಿ ಗೋಕಾಕ ಫಾಲ್ಸ್‍ನ ಗೋಕಾಕ ಟೆಕ್ಸಟೈಲ್ಸ್.ಲಿ. ಸಿಇಓ ರಮೇಶ.ಆರ್.ಪಾಟೀಲ, ಕೆ.ಪುಟ್ಟಸ್ವಾಮಿ ಮಾತನಾಡಿದರು.
ವೇದಿಕೆ ಮೇಲೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ| ಬಿ.ಕೆ.ಎಚ್.ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಕರಲಿಂಗಣ್ಣವರ, ನಿರ್ದೇಶಕರುಗಳಾದ ಸಿ.ಎ.ಕಾಡದವರ, ಎ.ಎಸ್.ಬಡಕುಂದ್ರಿ, ಐ.ಐ.ನೇರ್ಲಿ, ಎಸ್.ಎಸ್.ಪಾಟೀಲ, ಪಿ.ಎಂ.ಬಂಡಿ, ಬಿ.ಎಚ್.ಇನಾಮದಾರ, ಆರ್.ಪಿ.ಶಿರಾಳಕರ, ಆಶಾದೇವಿ ಎಂ.ಕತ್ತಿ, ವೈದ್ಯಕೀಯ ನಿರ್ದೇಶಕ ಡಾ| ಸಿ.ಎಸ್.ಬಣಕಾರ, ಎಎಂಸಿ ಕಾಲೇಜಿನ ಪ್ರಾಚಾರ್ಯ ಡಾ| ಜೆ.ಕೆ.ಶರ್ಮಾ, ಸಂಸ್ಥೆಯ ಮ್ಯಾನೇಜರ್ ಎಲ್.ಎಸ್. ಹಿಡಕಲ್ ಇದ್ದರು.
ಡಾ| ಸರ್ವಮಂಗಳಾ ಶಿರೋಳ ಸ್ವಾಗತಿಸಿ, ನಿರೂಪಿಸಿದರು. ಡಾ| ಎ.ಬಿ.ನರಗುಂದ ವಂದಿಸಿದರು.