RNI NO. KARKAN/2006/27779|Thursday, April 25, 2024
You are here: Home » breaking news » ಬೆಳಗಾವಿ:ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ

ಬೆಳಗಾವಿ:ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ 

ಸಿ.ಎಂ ಸಂಧಾನ ಸಫಲ : ಕೊನೆಗೂ ಮುಗಿದ ವೈದ್ಯರ ಮುಷ್ಕರ

ಬೆಳಗಾವಿ ನ 17 : ರಾಜ್ಯದಲ್ಲಿ ಖಾಸಗಿ ವೈದ್ಯರ ಪ್ರತಿಭಟನೆಯಿಂದ ಸಂಭವಿಸಿದ 25 ರಷ್ಟು ರೋಗಿಗಳ ಸಾವಿಗೆ ನನಗೇ ಪಾಪ ತಟ್ಟಲಿ ಎಂದು IMA ಅಧ್ಯಕ್ಷ ಡಾ. ರವೀಂದ್ರ ಮಾಧ್ಯಮಗಳೆದರು ತಪ್ಪೊಪ್ಪಿಕೊಂಡಿದ್ದಾರೆ. ಇಂದು ಮಧ್ಯಾಹ್ನ ವೈದ್ಯರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ ನಂತರ ಮಾಧ್ಯಮದವರ ಖಾರವಾದ ಪ್ರಶ್ನೆಗೆ ವಿಚಲಿತರಾದ ರವೀಂದ್ರ ನೇರ ಹೊಣೆ ಹೊತ್ತರು

ಸಚಿವ ರಮೇಶಕುಮಾರ ಮಾತನಾಡಿ ವೈದ್ಯಕೀಯ ಸಂಘದ ಸದಸ್ಯರು ತಮ್ಮ ಅನುಮಾನಗಳನ್ನು ಈಗ ಸಭೆಯಲ್ಲಿ ಪರಿಹರಿಸಿಕೊಂಡಿದ್ದಾರೆ. ಖಾಸಗಿ ವೈದ್ಯರ ಬಗೆಗೆ ಇದ್ದ ಶಾಸನವನ್ನು ಅನೇಕ ಚರ್ಚೆಯ ನಂತರ ತಿದ್ದುಪಡಿ ಮಂಡನೆ ಮಾಡಲು ಸರಕಾರ ಪ್ರಯತ್ನ ಮಾಡುತ್ತಿದ್ದಾಗ ತಪ್ಪು ಗ್ರಹಿಕೆಗಳು ನಡೆದವು. ಜಿಲ್ಲೆ, ತಾಲೂಕು ಮಟ್ಟದ ಖಾಸಗಿ ವೈದ್ಯರು ಆತಂಕಕ್ಕೀಡಾಗಿದ್ದಾರೆ. ಅಧಿವೇಶನದಲ್ಲಿ ಮಂಡಿಸಬೇಕಾಗಿದ್ದ ಕಾನೂನು ಸದ್ಯ ವೈದ್ಯರೊಂದಿಗಿನ ಮಾತುಕತೆಗೆ ಸೀಮಿತವಾಗಿದೆ. ವೈದ್ಯರನ್ನು ಈ ಕುರಿತು ಇಂದು ಮತ್ತು ಅಧಿವೇಶನದ ಮೊದಲ ದಿನವೇ ಸರಕಾರ ಮಾತನಾಡಿಸಿದೆ. ಆಧಾರ ರಹಿತ ದೂರು ಕೊಡುವವರ ಮೇಲೂ ನಿಯೋಜಿತ ಕಾಯ್ದೆಯಲ್ಲಿ ಕ್ರಮವಾಗುತ್ತದೆ. ಚಿಕಿತ್ಸೆ ಸಮಯ ಸಾವು ಆದರೆ ಶವ ಹಿಂದೆ ಪಡೆಯಲು ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಸಚಿವರು ತಿಳಿಸಿದರು. ಜನತೆ ತಮ್ಮ ಆರೋಗ್ಯ ಸಮಸ್ಯೆಗಳ ಮತ್ತು ದೂರುಗಳ ಬಗ್ಗೆ ಸರಕಾರಕ್ಕೆ ಗಮನ ಸೆಳೆಯಬಹುದು ಎಂದರು
ಸಿಎಂ ಮಾತನಾಡಿ: 2007 ರ KPME ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಆರ್ಥಿಕ ದುರ್ಬಲ ಜನತೆಗೆ ಎಲ್ಲರಂತೆ ಆರೋಗ್ಯ ಸೇವೆ ಸಿಗಬೇಕು ಎಂಬುವುದು ನಮ್ಮ ಆಶಯ. ಆದ್ದರಿಂದ ಈ ಕಾಯ್ದೆ ವೈದ್ಯರು ಮತ್ತು ಜನತೆ ಇಬ್ಬರಿಗೂ ಅನುಕೂಲಕರ ಎಂದರು. ಜನರಿಗೆ ಉತ್ತಮ ಆರೋಗ್ಯ ಮತ್ತು ಪ್ರಾಣರಕ್ಷಣೆ ಆಗಬೇಕು. ಜಂಟಿ ಸದನ ಸಮಿತಿಗೆ ವಹಿಸಿ ಏಕಾಭಿಪ್ರಾಯ ಮಂಡನೆಗೆ ಸಹ ಸದರಿ ನಿಯೋಜಿತ ಬಿಲ್ ಬಿಡಲಾಗಿತ್ತು. ವೈದ್ಯರಿಗೆ ಭಯ, ಆತಂಕ, ಅನುಮಾನ ಬೇಡವೇ ಬೇಡ ಎಂದು ಸಿಎಂ ಅಭಯ ನೀಡಿದ್ದಾರೆ. ಸರಕಾರದ ನಿಲುವು ತಿಳಿಸಲು ಸಮಯ ಕೇಳಿದರೂ ವೈದ್ಯರು ಪ್ರತಿಭಟನೆ ಮುಂದುವರೆಸಿದರು ಎಂದು ಸಿಎಂ ತಿಳಿಸಿದರು. ‘ಬೆಂಕಿ ಬಿದ್ದ ಮನೆಯ ಗಳ ಹಿರಿಯುವವರ ಮಾತಿಗೆ ಬೆಲೆ ಕೊಡಬೇಡಿ’ ಎಂದು ಪ್ರತಿಪಕ್ಷಗಳನ್ನು ಉದ್ದೇಶಿಸಿ ಸಿಎಂ ವೈದ್ಯರಿಗೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಸತ್ತವರು ಹೇಗೆ ಸತ್ತಿದ್ದಾರೆ ಎಂಬುವುದು ನಮಗೆ ಗೊತ್ತಿಲ್ಲ. ವೈದ್ಯರಾಗಲಿ, ಸರಕಾರವಾಗಲಿ ಜವಾಬ್ದಾರರಲ್ಲ ಇಡೀ ಸಮಾಜವೇ ಜವಾಬ್ದಾರಿ ಎಂದು ಸಿಎಂ ಪ್ರಶ್ನೆಯೊಂದಕ್ಕೆ ನುಣುಚಿಕೊಂಡರು. ವೈದ್ಯರಿಗೆ ಸಭೆಯಲ್ಲಿ ತಿಳಿವಳಿಕೆ ಮತ್ತು ಮನವರಿಕೆ ನೀಡಲಾಗಿದೆ, ಕೆಪಿಎಂಇ ತಿದ್ದುಪಡಿ ಕಾನೂನನ್ನು ಸರಕಾರ ಜಾರಿಗೆ ತಂದೆ ತರುತ್ತದೆ ಎಂದರು.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಾ. ರವೀಂದ್ರ ನಮ್ಮ ತಪ್ಪು ಕಲ್ಪನೆಗಳು ದೂರವಾಗಿವೆ. ಪ್ರತಿಭಟನೆ ಹಿಂಪಡೆಯುತ್ತೇವೆ. ರಾಜ್ಯದ 25 ರೋಗಿಗಳ ಸಾವಿನ ಪಾಪ ನೇರವಾಗಿ ನನಗೇ ತಟ್ಟಲಿ ಎಂದು IMA ಅಧ್ಯಕ್ಷ ರವೀಂದ್ರ ತಪ್ಪೊಪ್ಪಿಕೊಂಡಿದ್ದಾರೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಟಿ. ಬಿ. ಜಯಚಂದ್ರ, ಶರಣಪ್ರಕಾಶ ಪಾಟೀಲ, ಬಸವರಾಜ ರಾಯರೆಡ್ಡಿ, ರಮೇಶಕುಮಾರ, ಸಿಎಂ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತೀಕ ಮತ್ತಿತರರು ಸೇರಿದ್ದರು

Related posts: