RNI NO. KARKAN/2006/27779|Tuesday, December 2, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ

ಗೋಕಾಕ:ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ 

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಚಾಲನೆ

ಗೋಕಾಕ ನ 26 : ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮದಲ್ಲಿ ಒಂದಾದ “ಪತ್ರದಿಂದ ಹತ್ರ” ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಅವರು ಬುಧವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಪತ್ರಗಳನ್ನು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಕಳೆದ ಒಂದು ದಶಕದಿಂದ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಅವರು ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮಹತ್ತರ ಸಾಧನೆ ಮಾಡಲೆಂದು ಸತತ ಪ್ರಯತ್ನ ಮಾಡುತ್ತಿದ್ದಾರೆ. ಗುರೂಜೀ ಬಂದರು ಗುರುವಾರ, ದಿನಕ್ಕೊಂದು ವಿಜ್ಞಾನ ಚಿತ್ರ, ಮಿಸ್ ಕಾಲ್ ಮಾಡಿ ಉತ್ತರ ಪಡೆಯಿರಿ , ಪತ್ರದಿಂದ ಹತ್ರ, ನಕ್ಷೆ ಸಪ್ತಾಹ, ಪತ್ರ ಚಳುವಳಿ, ವಿಜ್ಞಾನ ರಂಗೋಲಿ, ವಿದ್ಯಾರ್ಥಿಗಳೊಂದಿಗೆ ಒಂದು ಫಲಪ್ರದ ಸಂವಾದ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ದತ್ತು, ಪದ್ಯ ಕಂಠಪಾಠ ಸೇರಿದಂತೆ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಎಸ್.ಎಸ್.ಎಲ್‌.ಸಿ. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯವನ್ನು ಹೋಗಲಾಡಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಬಿ.ಇ.ಓ. ಬಳಗಾರ ತಮ್ಮ ಶಿಕ್ಷಕರ ತಂಡದೊಂದಿಗೆ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಒಂದೆರಡು ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಂತ ಹೀನಾಯ ಫಲಿತಾಂಶ ಬಂದರೂ ಸಹ ಎದೆಗುಂದದೆ ಮತ್ತೆ ಪುಟಿದೇಳುವ ದಿಸೆಯಲ್ಲಿ ತಮ್ಮ ವಿಶಿಷ್ಟ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅವಿರತ ಶ್ರಮ ಪಡುತ್ತಿದ್ದಾರೆ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ. ಇವರ ಈ ಅವಿರತ ಕಾರ್ಯಕ್ಕೆ ವಲಯದ ಎಲ್ಲಾ ಶಿಕ್ಷಕರು ಹೆಗಲಿಗೆ ಹೆಗಲುಕೊಟ್ಟು ಕಾರ್ಯಮಾಡಿ ಮುಂಬರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮತ್ತೆ ರಾಜ್ಯದ ಗಮನ ಸೆಳೆಯುವ ತವಕದಲ್ಲಿರುವುದು ಮಕ್ಕಳಲ್ಲಿಯ ಉತ್ಸಾಹ ಹೆಚ್ಚಿಸಿದೆ.

ಶಾಸಕರ ಪತ್ರದಲ್ಲಿ ಏನಿದೆ ? :
“ಗೋಕಾಕ ಶೈಕ್ಷಣಿಕ ವಲಯದ ಆತ್ಮೀಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೇ”

ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟ. ಹತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ನಮ್ಮ ಗೋಕಾಕ ಶೈಕ್ಷಣಿಕ ವಲಯದ ನಿಮ್ಮೆಲ್ಲರಿಗೂ ಹಾರ್ಧಿಕ ಶುಭಾಶಯಗಳೊಂದಿಗೆ ಮುಂದಿನ ಶೈಕ್ಷಣಿಕ ಯಶಸ್ಸಿಗಾಗಿ ಶುಭಾಶೀರ್ವಾದಗಳು.
ಕಳೆದ ಹತ್ತು ವರ್ಷಗಳಿಂದ ಶಾಲಾ ಶಿಕ್ಷಣ ಪಡೆಯುತ್ತಿರುವ ನೀವು ಈ ವರ್ಷ ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಓದುತ್ತಿರುವಿರಿ. ಅಂದ ಹಾಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಈ ಹಿಂದಿನ ಪರೀಕ್ಷೆಗಳಂತೆಯೇ ಒಂದು ಪರೀಕ್ಷೆ, ಅಂದರೆ ಭಯ ಅಲ್ಲ ಅದು ಒಂದು ಸಂಭ್ರಮ. ಇದು ನಿಮ್ಮ ಮುಂದಿನ ಭವಿಷ್ಯಕ್ಕೆ ದಿಕ್ಕೂಚಿಯಾಗುತ್ತದೆ.
ಕಳೆದ ಅನೇಕ ವರ್ಷಗಳಿಂದ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಮ್ಮ ವಲಯದ ನುರಿತ ಉತ್ಸಾಹಿ ಗುರುಬಳಗ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಅವರು ನಿಮಗಾಗಿ ವರ್ಷವಿಡಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವುಗಳನ್ನು ಇತರೆ ಜಿಲ್ಲೆ ಮತ್ತು ತಾಲೂಕಿನವರು ಕೂಡಾ ಅನುಸರಿಸುತ್ತಿದ್ದಾರೆ. ನೀವು ಅವುಗಳನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ಸಾಧನೆ ಮಾಡಬೇಕು. ಅಪ್ಪ-ಅಮ್ಮನ ಕನಸನ್ನು ನನಸು ಮಾಡಬೇಕು.
ಈಗಾಗಲೇ ನಿಮ್ಮ ವಾರ್ಷಿಕ ಪರೀಕ್ಷೆಯ ವೇಳಾಪತ್ರಿಕೆ ಪ್ರಕಟವಾಗಿದೆ. ಈಗ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಿರಿ, ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣರಾಗಿ ನಿಮ್ಮ ಪಾಲಕ, ಪೋಷಕರಿಗೆ. ಗುರುಗಳಿಗೆ ಮತ್ತು ನಮ್ಮ ತಾಲೂಕಿಗೆ ಕೀರ್ತಿ ತರುವಂತಹ ಸಾಧನೆ ಮಾಡುತ್ತೀರೆಂಬ ವಿಶ್ವಾಸ ನನಗಿದೆ.
ದಿನ ನಿತ್ಯದ ಅಭ್ಯಾಸದ ಜೊತೆಗೆ ಆರೋಗ್ಯದ ಕಡೆಗೂ ಗಮನವಿರಲಿ. ಉತ್ತಮ ಸಾಧನೆಗಾಗಿ ನಿರಂತರ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿರಿ. ನಿಮ್ಮ ಭವಿಷ್ಯ ಉಜ್ವಲವಾಗಲಿ. ಮನೆಯಲ್ಲಿ ಅಪ್ಪ, ಅಮ್ಮ, ಹಾಗೂ ಹಿರಿಯರಿಗೆ ಹಾರ್ಧಿಕ ಶುಭಾಶಯಗಳೊಂದಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ.

ನಿಮಗೆ ಶುಭವಾಗಲಿ.
– ರಮೇಶ ಲ, ಜಾರಕಿಹೊಳಿ.ಶಾಸಕರು, ಗೋಕಾಕ

Related posts: