ಗೋಕಾಕ:ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಮತಕ್ಷೇತ್ರದ ಜನರ ದೇವರು : ಮುರಘರಾಜೇಂದ್ರ ಶ್ರೀ
ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಮತಕ್ಷೇತ್ರದ ಜನರ ದೇವರು : ಮುರಘರಾಜೇಂದ್ರ ಶ್ರೀ.
ಗೋಕಾಕ ನ 11: ಉತ್ತಮ ಸಮಾಜದ ನಿರ್ಮಾಣದಲ್ಲಿ ಮಠಾಧೀಶರ ಪಾತ್ರ ಬಹು ದೊಡ್ಡದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಗೆ ಸಮೀಪದ ಸಂಗನಕೇರಿ ಗ್ರಾಮದಲ್ಲಿ ಶನಿವಾರದಂದು ಜರುಗಿದ ಹನುಮಾನ ದೇವರ ಕಾರ್ತಿಕೋತ್ಸವದ ನಿಮಿತ್ಯ ನಡೆದ ಧರ್ಮ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಜತ್ತ-ಜಾಂಬೋಟಿ ರಸ್ತೆ ಸುಧಾರಣೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಪಟ್ಟಣಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ 15 ಮೀಟರ್ ಗಡಿರೇಖೆ ಹಾಕಿದ್ದು, ಸಾರ್ವಜನಿಕರ ಒಳತಿಗಾಗಿ 2 ಮೀಟರ್ ಕಡಿಮೆಗೊಳಿಸಿ ದ್ವಿಪಥ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಆದುದರಿಂದ ಗಡಿರೇಖೆ ಒಳಗೆ ಬರುವ ಸಾರ್ವಜನಿಕರು ಹಾಗೂ ಅಂಗಡಿ ಮುಗ್ಗಟ್ಟುಕಾರರು ಕೂಡಲೇ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ಸುಧಾರಣೆಗೆ ಅನುಕೂಲ ಕಲ್ಪಿಸಿಕೊಡುವಂತೆ ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿ ವ್ಯಾಪ್ತಿಯ ನಾಗರೀಕರಲ್ಲಿ ಮನವಿ ಮಾಡಿಕೊಂಡರು.
ಸಂಗನಕೇರಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದ ಹಲವಾರು ಪ್ರಗತಿಪರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇಲ್ಲಿನ ಮುಖಂಡರು ಒಂದಾಗಿ ಒಗ್ಗಟ್ಟಾಗಿ ಕೂಡಿಕೊಂಡು ಸಮಾಜದ ಪ್ರಗತಿಗೆ ದುಡಿಯುತ್ತಿರುವುದು ಶ್ಲಾಘನೀಯವೆಂದರು.
ಅಧ್ಯಕ್ಷತೆ ವಹಿಸಿದ್ದ ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವರೆಂದು ಅರಭಾವಿ ಮತಕ್ಷೇತ್ರದ ಜನರು ಕರೆಯುತ್ತಾರೆ. ಇಂತಹ ದಾನ ಶೂರ ಕರ್ಣನನ್ನು ಅರಭಾವಿ ಮತಕ್ಷೇತ್ರ ಪಡೆದಿರುವುದು ಪುಣ್ಯವೆಂದು ಪ್ರಶಂಸಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಇವರ ಪಾತ್ರ ಅತ್ಯಮೂಲ್ಯವಾಗಿದೆ. ಕಷ್ಠದಲ್ಲಿರುವ ವ್ಯಕ್ತಿಗಳಿಗೆ ಸಹಾಯಧನ ನೀಡುವ ಮಹಾನ್ ದಾನಿ ಬಾಲಚಂದ್ರ ಜಾರಕಿಹೊಳಿ ಅವರಾಗಿದ್ದಾರೆಂದು ಸ್ವಾಮಿಗಳು ಕೊಂಡಾಡಿದರು.
ಮಹಾಲಿಂಗಪೂರದ ಪ್ರವಚನಕಾರ ಇಬ್ರಾಹಿಂ ಸುತಾರ ಮಾತನಾಡಿ, ವಿದ್ಯೆ ಕಲಿಸದ ತಂದೆ, ಬುದ್ದಿ ಹೇಳದ ಗುರು ಹಾಗೂ ಬಿದ್ದಾಗ ನೋಡದಿರಲು ಬಾರದ ತಾಯಿ ಅವರು ಈ ಸಮಾಜದ ಶತ್ರುಗಳು ಇದ್ದಂತೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಹೆತ್ತವರ ಕರ್ತವ್ಯವಾಗಿದೆ. ದುಶ್ಚಟಗಳಿಂದ ದೂರವಿದ್ದು ಸಮಾಜದ ಅಭಿವೃದ್ಧಿಯಲ್ಲಿ ದುಡಿದು ಉತ್ತಮ ಸಮಾಜ ನಿರ್ಮಾಣಕ್ಕೆ ಯುವಕರು ದುಡಿಯುವಂತೆ ಹೇಳಿದರು.
ಕಾರ್ಯಕ್ರಮದ ಧಿವ್ಯ ಸಾನಿಧ್ಯವನ್ನು ಅರಭಾವಿ ದುರದುಂಡೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ನೇತೃತ್ವವನ್ನು ಸುಣಧೋಳಿಯ ಶಿವಾನಂದ ಸ್ವಾಮಿಗಳು, ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಸ್ವಾಮಿಗಳು ಹಾವೇರಿ ಅಂಬಿಗರ ಚೌಡಯ್ಯ ಗುರುಪೀಠದ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಹೂಲಿಕಟ್ಟಿಯ ಕುಮಾರದೇವರು, ಸ್ಥಳೀಯ ಮಲ್ಲಿಕಾರ್ಜುನ ಸ್ವಾಮಿಗಳು, ಕಲಿವಾಳದ ಕುಮಾರಸ್ವಾಮಿಗಳು, ಕಪರಟ್ಟಿಯ ಬಸವರಾಜ ಹಿರೇಮಠ ವಹಿಸಿದ್ದರು.