ಗೋಕಾಕ:ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ

ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ
ಗೋಕಾಕ ಅ 29 : ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ 1 ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ ನೀಡಿದರು.
ಮಂಗಳವಾರದಂದು ನಗರದ ಡಿ. ವಾಯ್.ಎಸ್.ಪಿ ಕಛೇರಿಯ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪೊಲೀಸ್ ಇಲಾಖೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದೇವರಂತೆ, ಸರಿ-ತಪ್ಪುಗಳ ಅರಿವು ಇರುವುದಿಲ್ಲ. ವಯೋಸಹಜವಾಗಿ ಹಿರಿಯ ನಾಗರಿಕರು ಸಹ ಮಕ್ಕಳು ಆಗಿರುತ್ತಾರೆ. ಬಾಲ್ಯ, ಯೌವ್ವನ, ಮುಪ್ಪು ಈ ಮೂರು ಹಂತಗಳಲ್ಲಿನ ಸಿಹಿ-ಕಹಿ ಅನುಭವಗಳು ಹಿರಿಯರಿಗೆ ಇರುತ್ತವೆ. ಒಂದು ಸಮಾಜ, ಕುಟುಂಬ ಉತ್ತಮವಾಗಿ ಸಾಗಲು ಹಿರಿಯರ ಮಾರ್ಗದರ್ಶನದ ಅವಶ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸಿ ತುಚ್ಛವಾಗಿ ಕಾಣುತ್ತಿರುವುದು ಸಾಮಾನ್ಯವಾಗಿದೆ. ಇದು ಸಲ್ಲದು. ಕುಟುಂಬದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹಿರಿಯರನ್ನು ಗೌರವ, ಆದರಗಳಿಂದ ನೋಡಿಕೊಳ್ಳಬೇಕು ಎಂದ ಅವರು ಹಿರಿಯರ ಪಾಲನೆ ಬಗ್ಗೆ ಅಸಡ್ಡೆ ವಹಿಸಿ ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಿರಿಯ ನಾಗರಿಕರ ಸಲಹೆಗಳನ್ನು ಮಕ್ಕಳು ತಪ್ಪಾಗಿ ಅರ್ಥೈಸದೇ ಅವರನ್ನು ಗೌರವಿಸುವ ಪ್ರವೃತ್ತಿ ಬೆಳೆಯಬೇಕು. ಮಕ್ಕಳು ಕಡೆಗಣಿಸಿದರೂ ಹಿರಿಯರು ಧೃತಿಗೆಡದೇ ಧೈರ್ಯವಾಗಿ ಸ್ವಾವಲಂಬಿ ಜೀವನ ನಡೆಸಲು ಸಿದ್ದರಾಗಿರಬೇಕು. ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರ ಹತ್ತು-ಹಲವು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯೋಜನೆಗಳು ಸಮರ್ಪಕವಾಗಿ ಹಿರಿಯ ನಾಗರಿಕರನ್ನು ತಲುಪಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿಗಳಾದ ಎಚ್.ಎಲ್.ಆಡಿನ ಅವರು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಶ್ರೀಮತಿ ಚೈತ್ರಾ ಕುಲಕರ್ಣಿ, ಡಿ.ವಾಯ್.ಎಸ್.ಪಿ ರವಿ ನಾಯಿಕ, ನ್ಯಾಯವಾದಿ ಸಂಘದ ಅಧ್ಯಕ್ಷ ಜಿ.ಬಿ.ಪಾಟೀಲ್, ಸಿಪಿಐ ಸುರೇಶ್ ಬಾಬು, ಪಿಎಸ್ಐ ಕೆ.ವಾಲಿಕರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ವಿ.ವಾಯ್.ಜಾಗನೂರ, ಸಹ ಕಾರ್ಯದರ್ಶಿ ಎಸ್.ಬಿ.ವಡೇರಹಟ್ಟಿ, ಖಜಾಂಚಿ ಎ.ಸಿ. ಕಂಡ್ರಟ್ಟಿ, ಮಹಿಳಾ ಪ್ರತಿನಿಧಿ ಶ್ರೀಮತಿ ವಿ.ಜಿ.ಸಿದ್ದಾಪೂರಮಠ ಉಪಸ್ಥಿತರಿದ್ದರು.
