ಗೋಕಾಕ:ಪ್ರಸಕ್ತ ಸಾಲಿನಿಂದಲೇ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ : ಸಚಿವ ಸತೀಶ

ಪ್ರಸಕ್ತ ಸಾಲಿನಿಂದಲೇ ನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ : ಸಚಿವ ಸತೀಶ
ಗೋಕಾಕ ಆ 26-: ಗೋಕಾಕ ನಗರಕ್ಕೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬೇಕು ಎಂಬ ದಶಕಗಳ ಕನಸು ನನಸಾಗಿದ್ದು, ತಾತ್ಕಾಲಿಕವಾಗಿ ನಗರದ ಸತೀಶ್ ಶುಗರ್ಸ ಅಕ್ಯಾಡಮಿ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಕ ಎಂಜಿನಿಯರಿಂಗ್ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದ ಸತೀಶ ಶುಗರ್ಸ ಅಕ್ಯಾಡಮಿ ಕಾಲೇಜಿನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿರುವ
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರು ಕೋರ್ಸ್‌ಗಳಿಗೆ ಮಂಜೂರಾತಿ ಸಿಕ್ಕಿದೆ. ಆರ್ಟಿಫಿಸಿಯಲ್ ಇಂಟಲಿಜೇನ್ಸ್, ಸೈಬರ್‌ಸೇಕ್ಯುರಿಟಿ, ಇಲೆಟ್ರಿಕಲ್ ಎಂಜನಿಯರಿಂಗ್ ವಿಭಾಗಗಳನ್ನು ಕಾರ್ಯಾರಂಭ ಮಾಡಲಿದ್ದು, ಪ್ರತಿ ವಿಭಾಗದಲ್ಲಿ ತಲಾ 60 ವಿದ್ಯಾರ್ಥಿಗಳು ದಾಖಲಾತಿಯನ್ನು ಪಡೆಯಬಹುದು. ಇದೇ ಸೆಪ್ಟೆಂಬರ್ ನಿಂದ ಪ್ರಾರಂಭವಾಗುವ ಈ ಕಾಲೇಜಿನಲ್ಲಿ ನುರಿತ ಶಿಕ್ಷಕ ಸಿಬ್ಬಂದಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನವರು ನೇಮಿಸಿದ್ದಾರೆ ಎಂದ ಸಚಿವರು ಗೋಕಾಕ ನಗರದಲ್ಲಿ ಪ್ರಾರಂಭವಾಗುವ ಕಾಲೇಜು ಮೂಡಲಗಿ, ಯರಗಟ್ಟಿ, ಹುಕ್ಕೇರಿ, ಸಂಕೇಶ್ವರ, ನೇರಸಗಿ, ಅಥಣಿ, ಚಿಕ್ಕೋಡಿ ಸೇರಿದಂತೆ ಇತರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಸಮೀಪವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ನಗರಗಳಿಗೆ ಹೋಗಿ ಕಲಿಯಲಿಕ್ಕೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು ಹಾಗಾಗಿ ಗೋಕಾಕ ನಗರದಲ್ಲಿ ಪ್ರಾರಂಭಗೊಂಡಿರುವ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಶೀಘ್ರದಲ್ಲೇ ಕಾಲೇಜಿಗೆ ಸ್ವಂತ ಕಟ್ಟಡ : ಪ್ರಸ್ತುತ ಮುಂಬರುವ 2 ವರ್ಷಗಳ ಕಾಲ ಈ ಇಂಜಿನಿಯರಿಂಗ್ ಕಾಲೇಜು ತಾತ್ಕಾಲಿಕವಾಗಿ ಸತೀಶ್ ಶುಗರ್ಸ ಅಕ್ಯಾಡಮಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಶಾಸಕ ರಮೇಶ ಜಾರಕಿಹೊಳಿ ನಗರದ ಎಪಿಎಂಸಿಯಲ್ಲಿ ನೀಡುವುದಾಗಿ ಹೇಳಿದ್ದಾರೆ. ಜಾಗ ಮಂಜೂರು ಆದ ನಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ವಿದ್ಯಾರ್ಜನೆ ಮಾಡಬೇಕು ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ ದೇಶಪಾಂಡೆ, ಪ್ರದೀಪ್ ಲಕ್ಕಶೆಟ್ಟಿ ಉಪಸ್ಥಿತರಿದ್ದರು.