RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ

ಗೋಕಾಕ:ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ 

ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ : ದಲಿತ ಮುಖಂಡರ ಆಕ್ರೋಶ

ಗೋಕಾಕ ನ: 7-ಎಸ್‍ಸಿ/ಎಸ್‍ಟಿ ಜನಾಂಗದ ಕುಂದು ಕೊರತೆ ವಿಚಾರಣೆ ಸಭೆಯಲ್ಲಿ ಕೈಕೊಂಡ ಯಾವ ನಿರ್ಣಯವೂ ಜಾರಿಯಾಗುತ್ತಿಲ್ಲ ಎಂದು ದಲಿತ ಮುಖಂಡರು ತೀವ್ರವಾದ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಮಂಗಳವಾರದಂದು ಜರುಗಿತು.
ನಗರದ ತಾ.ಪಂ. ಸಭಾ ಭವನದಲ್ಲಿ ತಹಶೀಲದಾರ ಜಿ.ಎಸ್.ಮಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್‍ಸಿ/ಎಸ್‍ಟಿ ಜನಾಂಗದ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ಈ ಆಕ್ರೋಶ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಕೈಗೊಂಡ ಯಾವ ನಿರ್ಣಯವೂ ಈವರೆಗೂ ಕಾರ್ಯಗತವಾಗಿಲ್ಲ. ಅಲ್ಲದೆ ಸಭೆಗೆ ತಾಲೂಕಾ ಮಟ್ಟದ ಅಧಿಕಾರಿಗಳು ಗೈರಹಾಜರಾಗಿ ಬೇರೆಯವರನ್ನು ಕಳಿಸಲಾಗುತ್ತಿದೆ. ಇದರಿಂದ ದಲಿತರಿಗೆ ಅವಶ್ಯಕ ಮಾಹಿತಿ ದೊರೆಯುತ್ತಿಲ್ಲ ಎಂದು ಹೆಚ್ಚು ಕಡಿಮೆ ಎಲ್ಲ ದಲಿತ ಮುಖಂಡರು ಆರೋಪಿಸಿದರಲ್ಲದೆ ಈ ರೀತಿ ಕಾಟಾಚಾರಕ್ಕೆ ಸಭೆ ಏಕೆ ಕರೆಯುತ್ತೀರಿ ಎಂದು ಪ್ರಶ್ನಿಸಿದರು.
30-6-2017ರಂದು ನಡೆದ ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿಯ ಸ್ಮಶಾನ ಜಾಗೆಗಳನ್ನು ಮಹಾತ್ಮಾ ಗಾಂಧೀ ರೋಜಗಾರ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಿ ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ನೀಡುವಂತೆ ಠರಾವು ಕೈಗೊಂಡಿದ್ದರೂ ಸಹ ಈವರೆಗೆ ಯಾವದೇ ಕೆಲಸ ಆಗಿರುವದಿಲ್ಲ. ರಾತ್ರಿ ಸಮಯದಲ್ಲಿ ಯಾರಾದರೂ ಸತ್ತೆ ಸ್ಮಶಾನಕ್ಕೆ ಹೋಗಲು ಸಹ ಆಗುತ್ತಿಲ್ಲ ಎಂದು ದಲಿತ ಮುಖಂಡರು ತಮ್ಮ ಅಳಲನ್ನು ತೋಡಿಕೊಂಡರಲ್ಲದೆ ಕೆಲವು ಹಳ್ಳಿಗಳಲ್ಲಿ ಸ್ಮಶಾನ ಜಾಗೆ ಕೂಡಾ ಇರುವದಿಲ್ಲ ಎನ್ನುವದನ್ನು ಅಧಿಕಾರಿಗಳ ಗಮನಕ್ಕೆ ತಂದರು.
ದಲಿತ ಜನಾಂಗದವರಿಗಾಗಿ ಮೀಸಲಿಟ್ಟ ಅನುದಾನವನ್ನು ಎಸ್‍ಸಿ/ಎಸ್‍ಟಿ ಕಾಲನಿಯಲ್ಲಿ ಬಳಸದೆ ಬೇರೆ ಕಡೆಗೆ ಕೆಲಸ ಮಾಡುವ ಹುನ್ನಾರವೂ ನಡೆದಿದೆ. ಮತ್ತು ಅಧಿಕಾರಿಗಳ ಅನಾಸ್ಥೆಯಿಂದ ಕೋಟ್ಯಾವಧಿ ರೂ. ಅನುದಾನ ಲ್ಯಾಪ್ಸ್ ಆಗುವ ಮಟ್ಟಕ್ಕೆ ಬಂದು ತಲುಪಿದೆ ಎಂದು ಖೇದ ವ್ಯಕ್ತ ಪಡಿಸಿದರು.
ನಿರುದ್ಯೋಗಿ ಯುವಕರಿಗಾಗಿ ಉದ್ಯೋಗ ಕೈಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಸಾಲ ಸೌಲಭ್ಯ ಒದಗಿಸಿದ್ದರೂ ರಾಷ್ಟ್ರೀಕೃತ ಬ್ಯಾಂಕುಗಳ ಮ್ಯಾನೇಜರರು ದಲಿತರಿಗೆ ಸಾಲವನ್ನೇ ನೀಡುತ್ತಿಲ್ಲ. ಇದರಿಂದ ಸರಕಾರದ ಯೋಜನೆಯ ಲಾಭ ತಾಲೂಕಿನ ದಲಿತ ಯುವಕರಿಗೆ ದೊರೆಯುತ್ತಿಲ್ಲ ಎಂದು ದೂರಿದಾಗ ಲೀಡ್ ಬ್ಯಾಂಕ್ ಮ್ಯಾನೇಜರರು ಸಭೆಗೆ ಗೈರ ಹಾಜರಾಗಿದ್ದರು. ಇದರಿಂದ ದಲಿತರಲ್ಲಿ ಮತ್ತಷ್ಟು ಆಕ್ರೋಶವನ್ನುಂಟು ಮಾಡಿತು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ಹಾಗೂ ಅರಭಾಂವಿ ಪ.ಪಂ. ಉಪಾಧ್ಯಕ್ಷ ರಮೇಶ ಮಾದರ ಅವರು ಸಭಿಕರನ್ನು ಶಾಂತ ಮಾಡಲು ಸಾಕು ಸಾಕಾಯಿತು. ದಲಿತರ ಬಗ್ಗೆ ಅನಾಸ್ಥೆ ತೋರಿಸುತ್ತಿರುವ ಬ್ಯಾಂಕ್ ಮ್ಯಾನೇಜರರ ವಿರುದ್ಧ ಅಸ್ಪøಶ್ಯತೆ ನಿರ್ಮೂಲನೆ ಕಾನೂನಿನನ್ವಯ ಕ್ರಮ ಕೈಕೊಳ್ಳಬೇಕೆಂದು ಸಭೆ ಒಕ್ಕೊರಲಿನಿಂದ ಒತ್ತಾಯಿಸಿತು.
ಹೊನಕುಪ್ಪಿ ಗ್ರಾಮದ ಎಸ್‍ಸಿ ಕಾಲನಿಯಲ್ಲಿ ಮಂಜೂರಾದ ಕುಡಿಯುವ ನೀರಿನ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರ ನಡೆದಿದ್ದು ಅದು ಈಗ ನಿಗದಿ ಪಡಿಸಿರುವ ಜಾಗದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಕಳೆದ 25 ವರ್ಷಗಳಿಂದ ಪಟಗುಂದಿ ಗ್ರಾಮದ ಎಸ್‍ಸಿ ಕಾಲನಿಯಲ್ಲಿರುವ ಅಂಗನವಾಡಿ ಸ್ಥಳಾಂತರಿಸಲು ಸಿಡಿಪಿಓ ಯತ್ನಿಸುತ್ತಿದ್ದು ಹಾಗೇನಾದರೂ ಅಂಗನವಾಡಿ ಸ್ಥಳಾಂತರಿಸಿದರೆ ತೀವ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರಲ್ಲದೆ ಸಿಡಿಪಿಓ ದಲಿತ ವಿರೋಧಿಗಳಾಗಿದ್ದಾರೆಂದು ನೇರವಾಗಿ ಆರೋಪಿಸಿದರು.
ಮೂಡಲಗಿ ಪಟ್ಟಣದಲ್ಲಿ ನಿರ್ಮಿಸಲಾದ ಸಮುದಾಯ ಭವನದ ಕಾಮಗಿರಿ ಕಳಪೆ ಮಟ್ಟದ್ದಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಲು ಹಿಂದಿನ ಸಭೆಯಲ್ಲಿ ಒತ್ತಾಯಿಸಲಾಗಿತ್ತು. ಆದರೆ ಅದರ ಬಗ್ಗೆ ಯಾವ ತನಿಖೆಯನ್ನೂ ಅಧಿಕಾರಿಗಳು ಮಾಡಿಲ್ಲ ಏಕೆ ಎಂದೂ ಸಭೆಯಲ್ಲಿ ಪ್ರಶ್ನಿಸಲಾಯಿತು.
ಸಭೆಯ ವೇದಿಕೆ ಮೇಲೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಫ್.ಬಿ.ಚಿನ್ನನ್ನವರ, ಸಮಾಜ ಕಲ್ಯಾಣ ಅಧಿಕಾರಿ ಎಸ್.ವ್ಹಿ.ಕಲ್ಲಪ್ಪನವರ, ಮುಖಂಡರಾದ ಪರಮೇಶ್ವರ ಹೊಸಮನಿ, ರಮೇಶ ಮಾದರ, ಗ್ರಾಮೀಣ ಠಾಣೆ ಪಿಎಸ್‍ಐ ಗಣಪತಿ ಕೊಂಗನೊಳ್ಳಿ ಇದ್ದರು.
ಸಭೆಯಲ್ಲಿ ಮುಖಂಡರಾದ ಸತ್ಯಜಿತ ಕರವಾಡಿ, ಲಕ್ಷ್ಮಣ ಕೆಳಗಡೆ, ರಮೇಶ ಸಣ್ಣಕ್ಕಿ, ಮನೋಹರ ಅಜ್ಜನಕಟ್ಟಿ, ಶ್ರೀಮತಿ ಸುಧಾ ಮುರಕುಂಬಿ, ಬಬಲೆಪ್ಪ ಮಾದರ ಸೇರಿದಂತೆ ಅನೇಕರು ಇದ್ದರು.
ಒಟ್ಟಾರೆಯಾಗಿ ಸಭೆಯಲ್ಲಿ ದಲಿತ ಮುಖಂಡರು ಪ್ರಶ್ನೆ ಕೇಳುತ್ತಿದ್ದರು. ಆದರೆ ಅಧಿಕಾರಿಗಳಿಂದ ಯಾವ ಉತ್ತರ ಬಾರದಿರುವದು ನೋಡಿದಾಗ ಎಸ್‍ಸಿ/ಎಸ್‍ಟಿ ಕುಂದು ಕೊರತೆ ಸಭೆ ನಡೆಸುವದಾದರೂ ಏಕೆ ಎನ್ನುವದು ತಿಳಿಯದಾಯಿತು.
ಮನೋಹರ ಅಜ್ಜನಕಟ್ಟಿ ದಲಿತ ಮುಖಂಡ :

ತಾಲೂಕಿನಲ್ಲಿ ದಲಿತರ ಕಾಲನಿ ಬಳಿ ಸಮುದಾಯ ಭವನ ಅಥವಾ ಅಂಬೇಡಕರ ಭವನ ನಿರ್ಮಾಣ ಮಾಡುವಾಗ ಒಮ್ಮೆಲೆ ದೇವರು ಬಂದು ಕುಳಿತುಕೊಳ್ಳುತ್ತಾನೆ. ದಲಿತರು ಬೆನ್ನಿಗೆ ಕಸಬರಿಗೆ ಕಟ್ಟಿಕೊಂಡು ಗ್ರಾಮದ ಒಳಗೆ ಬರುವ ಸಮಯದಲ್ಲಿ ಯಾವ ದೇವರು ಬರಲಿಲ್ಲ. ಡಾ. ಅಂಬೇಡಕರರು ದಲಿತರಿಗೆ ಇಂದು ಧ್ವನಿ ನೀಡಿರುವಾಗ ದೇವರು ಪ್ರತ್ಯಕ್ಷನಾಗುತ್ತಾನೆ. ಎಷ್ಟು ಹಾಸ್ಯಾಸ್ಪದ.

ಸತ್ಯಜೀತ ಕರವಾಡೆ ದಲಿತ ಮುಖಂಡ :

ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಲಿತ ಯುವಕರಿಗೆ ಸ್ವಯಂ ಉದ್ಯೋಗ ಕೈಕೊಳ್ಳಲು ಸಾಲ ಸೌಲಭ್ಯ ನೀಡುವ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬ್ಯಾಂಕ್ ಮ್ಯಾನೇಜರರು ದಲಿತ ಯುವಕರಿಗೆ ಸಾಲ ನೀಡುತ್ತಿಲ್ಲ.

Related posts: