ಗೋಕಾಕ:ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ
ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸುತ್ತಿದೆ : ತಹಶೀಲದಾರ ಜಿ.ಎಸ್.ಮಳಗಿ
ಗೋಕಾಕ ನ 1 : ಕರ್ನಾಟಕ ಭೂಪ್ರದೇಶಕ್ಕೆ ತನ್ನದೆಯಾದ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು ಇತಿಹಾಸದ ಪುಟಗಳಲ್ಲಿ ವೈಭವೋತವಾಗಿ ರಾರಾಜಿಸಿ ತನ್ನತನವನ್ನು ಮೆರೆದಿದೆ ಎಂದು ತಹಶೀಲದಾರ ಜಿ.ಎಸ್.ಮಳಗಿ ಹೇಳಿದರು.
ಬುಧವಾರದಂದು ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ನಿಮಿತ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು
ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಟರು, ಪುರಂದರ ದಾಸರು, ಕನಕ ದಾಸರು, ಕವಿಗಳು, ಸಾಹಿತಿಗಳು ಸೇರಿದಂತೆ ಹಲವರು ಕನ್ನಡ ನಾಡನ್ನು ಕಲೆ ಸಾಹಿತ್ಯ ಸಂಗೀತ ಶಿಲ್ಪಕಲೆಗಳಿಂದ ಕಟ್ಟಿ ಉಳಿಸಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅಲ್ಲದೇ ಕರ್ನಾಟಕ ಏಕೀಕರಣಗೊಂಡು ರಾಜ್ಯ ರಚನೆಯಾದ ನಂತರ ಕಲೆ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಸಾಧಿಸಿದೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವುದರ ಮೂಲಕ ದೇಶದ ಗಮನ ಸೆಳೆದಿದೆ ಎಂದು ಅವರು ತಿಳಿಸಿದರು.

ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಹಾಗೂ ನಗರ ಸಭೆ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ದಿನಾಚರಣೆಯಲ್ಲಿ ಪಾಲ್ಗೊಂಡ ರೂಪಕಗಳು ಹಾಗೂ ವಿದ್ಯಾರ್ಥಿಗಳು.
ನಮ್ಮ ನಾಡು ನುಡಿ ಸಂಸ್ಕಂತಿ ಹಾಗೂ ನಮ್ಮ ಬಾಷೆಯ ಮೇಲೆ ಇರುವ ಪ್ರೀತಿ ಉತ್ಸಾಹ ನವ್ಹಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ, ಭಾಷಾಭಿಮಾನವೆಂಬುದು ಕೇವಲ ತೋರಿಕೆಯಾಗಿ ಉಳಿಯದೇ ಅದೊಂದು ಸಹಜ ಗುಣವಾಗಿ ನಮ್ಮಲ್ಲಿ ಮೂಡಬೇಕು. ಕನ್ನಡ ಭಾಷೆಯನ್ನು ಪ್ರೀತಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಹಾಗೂ ನಗರ ಸಭೆ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ದಿನಾಚರಣೆಯ ಪಾಲ್ಗೊಂಡ ರೂಪಕ.
. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ ವಹಿಸಿದ್ದರು.
ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ನಗರ ಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸದಸ್ಯರಾದ ಎಸ್.ಎ.ಕೋತವಾಲ, ಜಯಾನಂದ ಹುಣಶ್ಯಾಳ, ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಉಪಾಧ್ಯಕ್ಷ ಬಾಹುಬಲಿ ಪಾಟೀಲ, ಬಿಜೆಪಿ ಮುಖಂಡ ಅಶೋಕ ಪೂಜಾರಿ, ಸೋಮಖರ ಮಗದುಮ್ಮ, ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನ್ನವರ, ಕಿರಣ ಡಮಾಮಗರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್. ಬಿ. ಚಿನ್ನನವರ, ತಾಲೂಕಾ ವೈದ್ಯಾಧಿಕಾರಿ ಆರ್.ಎಸ್.ಬೆಣಚಿನಮರಡಿ, ವಲಯ ಅರಣ್ಯ ಅಧಿಕಾರಿ ಗಿರೀಶ ಸಂಕ್ರಿ, ಎಇಇ ಎ.ಬಿ. ಹೊನ್ನಾವರ, ಪಿಎಸ್‍ಐ ಗಣಪತಿ ಕೊಂಗನೊಳಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ವಿ.ಕಲ್ಲಪನವರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ, ವಿ.ಎಲ್.ತಡಸಲೂರ, ಎಮ್.ಎಚ್.ಅತ್ತಾರ, ಎಮ್.ಡಿ.ಬೇಗ, ಎ.ಡಿ.ಸವದತ್ತಿ, ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಭಾಷೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯೋತ್ಸವ ನಿಮಿತ್ಯ ರೂಪಿಸಿದ ಅತ್ಯುತ್ತಮ ರೂಪಕಗಳಿಗೆ ಬಹುಮಾನ ವಿತರಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮವನ್ನು ಎ. ಜಿ. ಕೋಳಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ತಹಶೀಲದಾರ ಕಾರ್ಯಲಯದಿಂದ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಯೊಂದಿಗೆ ರೂಪಕವಾಹನಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಗಳು ಸಹಿತ ನಗರದ ಪ್ರಮುಖ ಬೀದಿಗಳ ಮುಖಾಂತರ ಸಂಚರಿಸಿ ವಾಲ್ಮೀಕಿ ಕ್ರೀಡಾಂಗಣ ತಲುಪಿತು.