ಗೋಕಾಕ:ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ
ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ
ಗೋಕಾಕ ಅ 21 : ಸಹಕಾರಿ ಸಂಘಗಳು ರೈತರ ಜೀವನಾಡಿ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶನಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ದುರದುಂಡಿಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದುರದುಂಡೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ರೈತರ ಆರ್ಥಿಕಾಭಿವೃದ್ಧಿಯಲ್ಲಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲರೂ ಪರಸ್ಪರ ಸಹಕಾರದಿಂದ ಮುನ್ನಡೆದು ಸಹಕಾರಿ ಸಂಘವನ್ನು ಬಲಗೊಳಿಸಿ. ಹೊಸದಾಗಿ ಅಸ್ಥಿತ್ವಕ್ಕೆ ಬಂದ ದುರದುಂಡೇಶ್ವರ ಪಿಕೆಪಿಎಸ್‍ಗೆ ಸಾಲದ ಮೊತ್ತವನ್ನು ಹೆಚ್ಚಳ ಮಾಡುವಲ್ಲಿ ಶ್ರಮಿಸುತ್ತೇನೆ. ಸಹಕಾರಿ ಸಂಘಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯವನ್ನು ಬೆರೆಸಬೇಡಿ. ರಾಜಕೀಯ ಬೆರೆಸಿದರೆ ಸಹಕಾರಿ ಸಂಘಗಳು ಅವನತಿಯಾಗುತ್ತವೆ ಎಂದು ಅವರು ಹೇಳಿದರು.
ದುರದುಂಡಿ ಗ್ರಾಮದ ಅಭಿವೃದ್ಧಿಗೆ ಗ್ರಾಮ ಪಂಚಾಯತ ಸಮೀತಿಯವರು ಪಕ್ಷಾತೀತವಾಗಿ ಶ್ರಮಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಗ್ರಾಮದ ಪ್ರಗತಿಗೆ ದುಡಿಯಬೇಕು. ಸರ್ಕಾರದಿಂದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಜನರ ಏಳ್ಗೆಗೆ ಹಾಗೂ ಮೂಲ ಸೌಕರ್ಯಕ್ಕೆ ಹೆಚ್ಚಿನಾಧ್ಯತೆ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಘಯೋನೀಬ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪ್ರಭಾಶುಗರ ನಿರ್ದೇಶಕ ರಾಮಣ್ಣಾ ಬಂಡಿ, ಡಾ.ಶಂಕರ ಗೋರಖನಾಥ, ಶಿವರಾಯಿ ಅಂತರಗಟ್ಟಿ, ಪಿಕೆಪಿಎಸ್ ಅಧ್ಯಕ್ಷ ಹಾಲಪ್ಪಾ ಅಂತರಗಟ್ಟಿ, ಉಪಾಧ್ಯಕ್ಷೆ ದ್ರಾಕ್ಷಾಯಣಿ ಬಂಗಾರಿ, ನಿಂಗಪ್ಪ ಅಂತರಗಟ್ಟಿ, ಯಮನಪ್ಪ ಕಡಕೋಳ, ದುಂಡಪ್ಪ ಅರಭಾವಿ, ವೀರೇಂದ್ರ ಪತ್ತಾರ, ಭೀಮಶಿ ಚಂದವ್ವಗೋಳ, ಭೀಮಶಿ ಅಂತರಗಟ್ಟಿ, ಮಾರುತಿ ತಳವಾರ, ಸಂಘದ ಕಾರ್ಯನಿರ್ವಾಹಕ ಪರಸಪ್ಪ ವಗ್ಗನವರ, ಮುಂತಾದವರು ಉಪಸ್ಥಿತರಿದ್ದರು.