ಗೋಕಾಕ:ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ : ಶಾಸಕ ಬಾಲಚಂದ್ರ
ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ : ಶಾಸಕ ಬಾಲಚಂದ್ರ
ಗೋಕಾಕ ಅ 16: ಮೂಡಲಗಿ ತಾಲೂಕು ಸಲುವಾಗಿ ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರ ಸಂಜೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಮೂಡಲಗಿ ಪುರಸಭೆ ವ್ಯಾಪ್ತಿಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಮೂಡಲಗಿ ತಾಲೂಕು ರಚನೆ ಸಂಬಂಧ 34 ದಿನ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಕೆಲವರು ನನ್ನ ವಿರುದ್ಧ ಮಾತನಾಡಿದ್ದಾರೆ. ಸುಳ್ಳು ವದಂತಿ ಹಬ್ಬಿಸಿದ್ದಾರೆ. ರದ್ದಾದ ತಾಲೂಕು ಮರು ಘೋಷಣೆ ಮಾಡಿಸಿರುವುದು ಎಷ್ಟು ಕಷ್ಟದ ಕೆಲಸ ಎಂಬುದು ಕೆಲವರಿಗೆ ಅರಿವಿಲ್ಲ. ಸಾಕಷ್ಟು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರದ್ದಾಗಿರುವ ಮೂಡಲಗಿಯನ್ನು ತಾಲೂಕಾ ಕೇಂದ್ರವನ್ನಾಗಿ ಮರು ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದೆ. ನನ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮನವಿ ಮೇರೆಗೆ ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಮೂಡಲಗಿಯನ್ನು ತಾಲೂಕನ್ನಾಗಿ ಘೋಷಿಸಿದ್ದಾರೆಂದು ಹೇಳಿದರು.
ಮುಂದಿನ ಜನೇವರಿ 1 ರಿಂದ ಮೂಡಲಗಿ ಹೊಸ ತಾಲೂಕು ಕಾರ್ಯಾರಂಭ ಮಾಡಲಿದೆ. ಇದರಿಂದ ತಾಲೂಕು ಮಟ್ಟದ ಸರ್ಕಾರಿ ಕಛೇರಿಗಳು ಆರಂಭವಾಗಲಿವೆ. ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಮಾಡಿ ಕೊಡುವುದಾಗಿ ಅವರು ಹೇಳಿದರು. ಮೂಡಲಗಿ ತಾಲೂಕಿನ ಅಭಿವೃದ್ಧಿಗೆ ಸದಾ ಬದ್ಧನಿದ್ದೇನೆ. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡುವುದಿಲ್ಲ. ಎಲ್ಲಿ ನ್ಯಾಯ, ನೀತಿ, ಧರ್ಮ ಇದೆಯೋ ಅಲ್ಲಿ ಜಯ ಸಿಗುತ್ತದೆ. ಮೂಡಲಗಿ ಹೊಸ ತಾಲೂಕು ಆಗಿರುವುದರಿಂದ ಮೂಡಲಗಿ ಭಾಗದ ಜನರಿಗೆ ಗೆಲವು ಆಗಿದೆ. ಇದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು. ಯಾರಿಗೂ ಹೆದರಬೇಡಿ. ನಿಮ್ಮೊಂದಿಗೆ ನಾನಿದ್ದೇನೆ. ಇನ್ನು ಮುಂದೆ ನಿಮಗೆ ಅಚ್ಛೇದಿನ್ ಬರುತ್ತದೆ ಎಂದು ಅವರು ಹೇಳಿದರು.
ಕಳೆದ ದಿ. 11 ರಂದು ಮೂಡಲಗಿ ತಾಲೂಕು ಘೋಷಿಸಿದ ಸಂದರ್ಭದಲ್ಲಿ ಮೂಡಲಗಿಯಲ್ಲಿ ನಡೆದ ವಿಜಯೋತ್ಸವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ವರ್ತನೆಯಿಂದ ಶ್ರೀಪಾದಬೋಧ ಸ್ವಾಮೀಜಿ ಅವರಿಗೆ ನೋವಾಗಿರಬಹುದು. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಸ್ವಾಮೀಜಿಯವರನ್ನು ಅತೀ ಶೀಘ್ರ ಭೇಟಿ ಮಾಡುತ್ತೇನೆಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮೂಡಲಗಿ ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಬಿಡಿಸಿಸಿ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ಈರಣ್ಣಾ ಹೊಸೂರ, ರಾಮಣ್ಣಾ ಹಂದಿಗುಂದ, ರವಿ ಸಣ್ಣಕ್ಕಿ, ಮುಖಂಡರಾದ ನಿಂಗಪ್ಪ ಫಿರೋಜಿ, ಲಾಲಸಾಬ ಸಿದ್ಧಾಪೂರ, ಶರೀಫ ಪಟೇಲ್, ಭೀಮಶಿ ಸೋನವಾಲ್ಕರ, ಕೆ.ಬಿ. ಪಾಟೀಲ, ಶ್ರೀಶೈಲ ಬಳಿಗಾರ, ಅಜೀಜ ಡಾಂಗೆ, ಮಲೀಕ ಹುಣಶ್ಯಾಳ, ಸುಭಾಸ ಸೋನವಾಲ್ಕರ, ಅಪ್ಪಾಸಾಬ ಹೊಸಕೋಟಿ, ಅಜ್ಜಪ್ಪ ಬಳಿಗಾರ, ರವಿ ಮಾಳೋಜಿ, ಧರ್ಮಣ್ಣಾ ಪೋಳ, ವಿಲಾಸ ನಾಶಿ, ಪ್ರಕಾಶ ಮಾದರ , ಪುರಸಭೆ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.