ಗೋಕಾಕ:ಶೇ 76.13% ರಷ್ಟು ಮತದಾನ : ಗೋಕಾಕನಲ್ಲಿ ಚುನಾವಣೆ ಶಾಂತಿಯುತ

ಶೇ 76.13% ರಷ್ಟು ಮತದಾನ : ಗೋಕಾಕನಲ್ಲಿ ಚುನಾವಣೆ ಶಾಂತಿಯುತ
ಗೋಕಾಕ ಮೇ 10 : ಗೋಕಾಕ ಮತಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ಮತದಾನ ಬುಧವಾರ ಬೆಳಗ್ಗೆ ಬಿರುಸಿನಿಂದ ನಡೆಯಿತು. ಕೆಲಕಡೆ ತಾಂತ್ರಿಕ ಸಮಸ್ಯೆಯಿಂದ ಮತದಾನ ಪ್ರಕ್ರಿಯೆ ವಿಳಂಬವಾಗಿದ್ದು, ಬಹುತೇಕ ಕಡೆ ಶಾಂತಿಯುತವಾಗಿ ವೋಟಿಂಗ ಆಗಿದ್ದು, ಶೇಕಡಾ 76.13% ಮತದಾನವಾಗಿದೆ.
ಕೆಲ ಮತಗಟ್ಟೆಗಳ ಮುಂದೆ ಮುಂಜಾನೆಯಿಂದಲೇ ಜನರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರೆ ಕೆಲವೆಡೆ ಮತದಾನ ನಿಧಾನವಾಗಿತ್ತು. ಬೆಳ್ಳಂಬೆಳಗ್ಗೆ ಮತದಾನ ಚುರುಕುಗೊಂಡಿತ್ತು. ಕೆಲವೊಂದೆಡೆ ಮತಯಂತ್ರಗಳಲ್ಲಿ ಲೋಪದೋಷಗಳು ಕಂಡು ಬಂದಿದ್ದು ಅಧಿಕಾರಿಗಳು ತ್ವರಿತವಾಗಿ ಸರಿಪಡಿಸಿದರು.
ವಿಶೇಷವಾಗಿ ಅಂಗವಿಕಲರಿಗೆ ಹಾಗೂ ವಯೋವೃದ್ದರಿಗೆ ವ್ಹೀಲಚೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿಗಳು ಅಂಗವಿಕಲರಿಗೆ ಸಹಾಯ ಮಾಡಿದರು. ಪೋಲೀಸ ಇಲಾಖೆ ಅವಶ್ಯಕ ಬಂದೋಬಸ್ತ ಏರ್ಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆದಿರುವದಿಲ್ಲ. ಮತದಾರರಿಗೆ ತೊಂದರೆಗಳು ಆಗದಂತೆ ಮತದಾನಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ವಿಶೇಷವಾದ ಮುರ್ತುವರ್ಜಿ ವಹಿಸಿದ್ದರು.