RNI NO. KARKAN/2006/27779|Saturday, July 12, 2025
You are here: Home » ವಿಶೇಷ ಲೇಖನ » ಅಕ್ರಮ ಮರಳು ದಂಧೆಯನ್ನು ಸಕ್ರಮಗೊಳಿಸಿ ಸರಳ ನಿಯಮ ರೂಪಿಸಲು ಸಾರ್ವಜನಿಕರ ಆಗ್ರಹ

ಅಕ್ರಮ ಮರಳು ದಂಧೆಯನ್ನು ಸಕ್ರಮಗೊಳಿಸಿ ಸರಳ ನಿಯಮ ರೂಪಿಸಲು ಸಾರ್ವಜನಿಕರ ಆಗ್ರಹ 

  1. ಅಕ್ರಮ ಮರಳು ದಂಧೆಯನ್ನು ಸಕ್ರಮಗೊಳಿಸಿ ಸರಳ ನಿಯಮ ರೂಪಿಸಲು ಸಾರ್ವಜನಿಕರ ಆಗ್ರಹ

ಕಾಶೀಮ ಹಟ್ಟಿಹೋಳಿ,ಖಾನಾಪೂರ

ಖಾನಾಪೂರ: ಮರಳು ಸಾಮಾನ್ಯವಾಗಿ ಕಟ್ಟಡ ಅಥವಾ ಇನ್ನಾವುದೇ ನಿರ್ಮಾಣ ಕಾಮಗಾರಿಗಳಿಗೆ ಅತೀ ಅವಶ್ಯವಿದ್ದ ಕಚ್ಚಾವಸ್ತು. ಹೀಗಾಗಿ ಸಹಜವಾಗಿಯೇ ಮರಳಿಗೆ ಎಲ್ಲ ಕಡೆಗಳಲ್ಲಿಯೂ ತೀವ್ರವಾದ ಬೇಡಿಕೆಯಿದೆ. ನಮ್ಮ ಸರ್ಕಾರದ ಅಸಮರ್ಪಕ ಮರಳು ನೀತಿಯಿಂದಾಗಿ ಕಟ್ಟಡ ನಿರ್ಮಾಣಕಾರ್ಯಕ್ಕಾಗಿ ಮರಳು ಸಿಗುವುದು ದುರ್ಲಭವಾಗಿದ್ದು, ಅಕ್ರಮ ಮರಳು ದಂಧೆಯನ್ನು ಸಕ್ರಮಗೊಳಿಸಿ ನಿರ್ಮಾಣ ಕ್ಷೇತ್ರಕ್ಕೆ ನಿಯಮಿತವಾಗಿ ಮರಳು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕಿನ ಸಾರ್ವಜನಿಕರು ಮತ್ತು ಕಟ್ಟಡ ನಿರ್ಮಾಣಕಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸರಕಾರ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ ಕಾರಣ ಕಟ್ಟಡ ನಿರ್ಮಾಣಕಾರ್ಯ ಬಹುತೇಕ ಸ್ಥಗಿತಗೊಂಡಿದ್ದು, ಇದರಿಂದ ಈ ಕಸುಬನ್ನೇ ಅವಲಂಬಿಸಿರುವ ಗಾರೆ ಕೆಲಸದವರು, ಗೌಂಡಿಗಳು, ಬಾರ್‍ಬೆಂಡರ್‍ಗಳು, ಬಡಿಗರು, ಮೇಸ್ತ್ರಿಗಳು, ಸರಕು ಸಾಗಣೆ ವಾಹನಗಳ ಮಾಲೀಕರು, ಚಾಲಕರು ಹಾಗೂ ಕೂಲಿ ಕಾರ್ಮಿಕ ವರ್ಗದವರು ಅತಂತ್ರ ಸ್ಥಿತಿಗೆ ಬಂದಿದ್ದಾರೆ. ಮರಳಿನ ಅಭಾವದಿಂದಾಗಿ ಇವರು ಕೆಲಸವಿಲ್ಲದೇ ದಿನಗಳನ್ನು ಕಳೆಯುತ್ತಿರುವ ಕಾರಣ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಸರಕು ಸಾಗಾಣಿಕೆ ವಾಹನಗಳನ್ನು ನಡೆಸುವವರು ವಾಣಿಜ್ಯ ಸಂಸ್ಥೆಗಳಿಂದ ಸಾಲ ಸೋಲ ಮಾಡಿ ವಾಹನಗಳನ್ನು ಖರೀದಿಸಿದ್ದಾರೆ ಆದರೆ ದಂಧೆಯಿಲ್ಲದ ಕಾರಣ ವಾಹನದ ಕಂತು ತುಂಬಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

ಮರಳಿಗೆ ಇರುವ ಈ ತೆರನಾದ ಭಾರೀ ಬೇಡಿಕೆಯನ್ನೇ ಬಂಡವಾಳವಾಗಿಟ್ಟುಕೊಂಡ ಕೆಲವರು ತಾಲೂಕಿನ ಮೂವತ್ತಕ್ಕೂ ಹೆಚ್ಚು ಗ್ರಾಮಗಳ ಸುತ್ತಮುತ್ತಲಿನ ಕೆರೆ ಮತ್ತು ಕೃಷಿ ಜಮೀನುಗಳಲ್ಲಿ ಫಿಲ್ಟರ್ ಯಂತ್ರ ಅಳವಡಿಸಿ ಮರಳು ಸಂಗ್ರಹಿಸಿ ಮಾರುತ್ತಿದ್ದಾರೆ. ತಾಲೂಕಿನ ಪ್ರಮುಖ ಜಲಮೂಲಗಳಾಗಿರುವ ಹಳ್ಳಗಳು, ನದಿ ತೀರದ ಬಯಲುಗಳಲ್ಲಿ ಇರುವ ನೂರಾರು ಎಕರೆ ಕೃಷಿ ಭೂಮಿಯನ್ನೇ ತಮ್ಮ ಮರಳು ಶೇಖರಣೆಯ ತಾಣವಾಗಿಸಿಕೊಂಡಿರುವ ಮರಳು ಲೂಟಿಕೋರರು ಮರಳು ತೆಗೆಯಲು ಸ್ಥಳೀಯ ಜನರನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕೆಲಸಕ್ಕೆ ಅವರು ನಿಗದಿತ ಕೂಲಿಗಿಂತ ಹೆಚ್ಚು ಕೂಲಿಯನ್ನು ನೀಡುವ ಕಾರಣ ಜನರೂ ಕೂಡ ತಮ್ಮ ರೈತಾಪಿ ಕೆಲಸಗಳನ್ನು ಬದಿಗೊತ್ತಿ ಮರಳು ಶೇಖರಣೆಗೆ ಧಾವಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತಾಲೂಕಿನ ಮರಳಿಗೆ ಇರುವ ವ್ಯಾಪಕವಾದ ಬೇಡಿಕೆಯ ಹಿನ್ನೆಲೆಯಲ್ಲಿ ಮರಳು ಮಾಫಿಯಾ ಸದ್ದಿಲ್ಲದೇ ಅಕ್ರಮ ಮರಳುಗಾರಿಕೆಗೆ ಮುಂದಾಗಿದ್ದು, ಇದನ್ನು ತಡೆಯಲು ಹೋದ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರನ್ನು ಹಣದಿಂದಲೋ ಅಥವಾ ರಾಜಕೀಯ ಒತ್ತಡದಿಂದಲೋ ಸುಮ್ಮನಾಗಿಸಿ ತನ್ನ ದಂಧೆಯನ್ನು ರಾಜಾರೋಷವಾಗಿ ನಡೆಸುವ ಮೂಲಕ ಮರಳಿನ ದರವನ್ನು ಗಗನಕ್ಕೇರಿಸಿದೆ. ತಾಲೂಕಿನ ವಿವಿಧೆಡೆ ತೆಗೆಯಲಾಗುವ ಮರಳನ್ನು ಟ್ರಾಕ್ಟರ್, ಟೆಂಪೋ ಹಾಗೂ ಲಾರಿಗಳ ಮೂಲಕ ಬೆಳಗಾವಿ, ಬೈಲಹೊಂಗಲ, ಎಂ.ಕೆ ಹುಬ್ಬಳ್ಳಿ, ಹಿರೇ ಬಾಗೇವಾಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಹಲಸಿ ಸುತ್ತಮುತ್ತ ಶೇಖರಣೆಯಾಗುವ ಮರಳು ಧಾರವಾಡ ತಾಲೂಕಿನ ಅಳ್ನಾವರ ಮತ್ತು ಉತ್ತರ ಕನ್ನಡ ಜಿಲ್ಲೆಯ ರಾಮನಗರ, ಹಳಿಯಾಳ, ದಾಂಡೇಲಿ ಪಟ್ಟಣಗಳಿಗೆ ಸಾಗಿಸಲಾಗುತ್ತಿದೆ.

ಮರಳು ಸಾಗಿಸುವ ವಾಹನಗಳು ಸಾಮಾನ್ಯವಾಗಿ ಮಧ್ಯರಾತ್ರಿಯಿಂದ ನಸುಕಿನ ಜಾವದ ನಡುವಿನ ಅವಧಿಯಲ್ಲಿ ಸಂಚರಿಸುತ್ತಿವೆ.
ಮರಳು ಶೇಖರಣೆಯ ಬೋಟ್‍ಗಳು ಹಾಗೂ ಫಿಲ್ಟರ್‍ಗಳು ಹೊರಸೂಸುವ ರಾಡಿಯನ್ನು ನೇರವಾಗಿ ಮಲಪ್ರಭಾ ನದಿ ಹಾಗೂ ಅಲಾದ್ರಿ ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ನದಿ ಹಾಗೂ ಹಳ್ಳಗಳ ನೀರು ಕಲುಷಿತಗೊಂಡು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಮೊದಲೇ ನೀರಿಲ್ಲದೇ ಬರಡಾದ ನದಿಯಲ್ಲಿ ಮರಳು ತೆಗೆದು ಉಳಿದ ಕೊಳಚೆ ನೀರನ್ನು ನದಿಗೆ ಬಿಡುತ್ತಿರುವ ದೃಶ್ಯ ನರಕಸದೃಶವಾಗಿದೆ. ಇದರಿಂದ ಈ ನದಿಯನ್ನೇ ನೆಚ್ಚಿಕೊಂಡ ಜಲಚರಗಳು, ಕ್ರಿಮಿಕೀಟಗಳು, ಸರಿಸೃಪಗಳು ಹಾಗೂ ಪಕ್ಷಿ ಸಂಕುಲ ಸಂಕಷ್ಟಕ್ಕೀಡಾಗಿದ್ದು, , ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸದ್ಯ ತಲೆದೋರಿರುವ ಬರಗಾಲದ ಸಂದರ್ಭದಲ್ಲಿ ನೀರಿಲ್ಲದೇ ನಲುಗಿದ ನದಿಮೂಲಗಳ ಒಡಲಿಗೆ ಕೊಡಲಿಯೇಟು ಹಾಕುವ ಈ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ಸಾಗುತ್ತಿದ್ದು, ಕುಡಿಯುವ ನೀರನ್ನು ಕಲುಷಿತಗೊಳಿಸುವ ದಂಧೆಕೋರರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಪರಿಕಲ್ಪನೆ ಇಲ್ಲದಿರುವುದು ವಿಪರ್ಯಾಸ.

ಮರಳು ನಿರ್ಮಾಣಕ್ಷೇತ್ರದಲ್ಲಿ ಅನಿವಾರ್ಯ ವಸ್ತುವಾದರೂ ಸಕ್ರಮವಾಗಿ ಸಿಗದ ಪರಿಣಾಮ ಅಕ್ರಮವಾಗಿ ಸಂಗ್ರಹಿಸಿ ಸಾಗಿಸಲಾಗುತ್ತಿದೆ. ಕದ್ದು ಮುಚ್ಚಿ ನಡೆಯುವ ಮರಳು ದಂಧೆಯಿಂದಾಗಿ ಇಟ್ಟಿಗೆ, ಸಿಮೆಂಟ್‍ಗಿಂತ ಮರಳಿನ ದರ ಹೆಚ್ಚಾಗಿದ್ದು, ಇದು ಕಟ್ಟಡ ನಿರ್ಮಾಣ ಮಾಡುವವರಿಗೆ ಹೊರೆಯಾಗಿ ಪರಿಣಮಿಸಿದೆ. ಒಂದು ಲಾರಿ ಮರಳಿನ ಹಿಂದೆ ಹತ್ತಾರು ಕೂಲಿ ಕಾರ್ಮಿಕರ ಶ್ರಮವಿದ್ದು, ಈಗಾಗಲೇ ಮರಳು ಸಿಗುವ ಸ್ಥಳಗಳನ್ನು ಪರಿಶೀಲಿಸಿ ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸುವಲ್ಲಿ ಸರಳ ನಿಯಮಗಳನ್ನು ರೂಪಿಸಿದರೆ ಇತ್ತ ಕಟ್ಟಡ ನಿರ್ಮಾಣ ಮಾಡುವವರಿಗೆ, ಅತ್ತ ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮಾಲೋಚಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಶೀವಾನಂದ ಉಳ್ಳಾಗಡ್ಡಿ,ತಹಶೀಲ್ದಾರರು,ಖಾನಾಪೂರ:
ಈಗಾಗಲೇ ಹಲವಾರು ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು ಶೇಖರಣೆಯ ಬೋಟ್‍ಗಳು ಹಾಗೂ ಫಿಲ್ಟರ್‍ಗಳು ಹೊರಸೂಸುವ ರಾಡಿಯನ್ನು ವಶಪಡಿಸಕೊಳ್ಳಲಾಗಿದ್ದು,ಮುಂಬರುವ ದಿನಗಳಲ್ಲಿ ಅಕ್ರಮ ಮರಳು ಅಡ್ಡೆಗಳನ್ನು ಪೂರ್ಣ ಪ್ರಮಾಣದಲ್ಲಿ ¨ಬಂದಮಾಡಲಾಗುವದು. ಜೋತೆಗೆ ತಾಲೂಕಿನ ಕರಂಬಳದಲ್ಲಿ ಪಿ,ಡಬ್ಲೂ ಇಲಾಖೆಯ ಸಹಕಾರದೋಂದಿಗೆ ಮರಳು ತೆಗೆಯಲು ಅನುಮತಿ ನೀಡಲಾಗಿದ್ದು, ಮನೆ ನಿರ್ಮಿಸುವರು ಗ್ರಾ.ಪಂ ನಿಂದ ಅನುಮತಿ ಪತ್ರ ಪಡೆದು ಮರಳು ತೆಗೆದುಕೋಂಡು ಹೋಗಬಹುದು.

Related posts: