RNI NO. KARKAN/2006/27779|Thursday, December 7, 2023
You are here: Home » breaking news » ಬೆಳಗಾವಿ :ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಮಾಮಿ ಇನ್ನಿಲ್ಲ.

ಬೆಳಗಾವಿ :ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಮಾಮಿ ಇನ್ನಿಲ್ಲ. 

ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಮಾಮಿ ಇನ್ನಿಲ್ಲ.
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಅ 23 :


ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ್ ಮಮಾಮಿ ಇನ್ನಿಲ್ಲ. ಅವರು ಭಾನುವಾರ ಮುಂಜಾನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸವದತ್ತಿಯ ಮೋದಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರಿಗೆ 56 ವರ್ಷ ವಯಸ್ಸಾಗಿತ್ತು.ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಪ್ರಬಲ ಆಧಾರ ಸ್ತಂಭಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ಕಾಕತಾಳೀಯವೆಂಬಂತೆ ಅವರ ತಂದೆ ಚಂದ್ರಶೇಖರ್ ಮಮಾಮಿ ಅವರು ೧೯೯೯ ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನಿಧನರಾದರು.

ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ಆಡಳಿತ ಮಂಡಳಿ ಸದಸ್ಯರಾಗಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ಮೂರು ಬಾರಿ ಶಾಸಕರಾಗಿ, ವಿಧಾನಸಭೆ ಡೆಪ್ಯುಟಿ ಸ್ಪೀಕರ್‌ ಹುದ್ದೆವರೆಗೆ ಸಾಗಿದ ಸಾಧನೆಯ ಹಾದಿ ಹೀಗಿದೆ. 1966ರ ಜನವರಿ 18ರಂದು ಜನಿಸಿದ ಆನಂದ್‌ ಮಾಮನಿ ಆರಂಭದಿಂದಲೂ ಜನರೊಡನೆ ಬೆರೆಯುವುದರ ಜತೆಗೆ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಇವರ ತಂದೆ ಚಂದ್ರಶೇಖರ್‌ ಮಾಮನಿ, ತಾಯಿ ಗಂಗಮ್ಮ ಆಗಿದ್ದರು. ಸವದತ್ತಿಯ ಕೆಎಲ್‌ಇ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಇವರು, ಬಿ.ಕಾಂ ಪದವೀಧರರಾಗಿದ್ದರು. ಇವರು ರಾಜಕೀಯ ಪ್ರವೇಶಿಸುವವರೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಹತ್ತಿ ವ್ಯಾಪಾರಿಯೂ ಆಗಿದ್ದರು. ರತ್ನಾ ಅವರನ್ನು ವರಿಸಿದ ಆನಂದ್‌ ಮಾಮನಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಆನಂದ್‌ ಮಾಮನಿ ಅವರ ತಂದೆ ಚಂದ್ರಶೇಖರ ಮಾಮನಿ 2 ಬಾರಿ ಶಾಸಕರಾಗಿ, 1 ಬಾರಿ ಉಪಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರ ದೊಡ್ಡಪ್ಪನ ಮಗ ವಿಶ್ವನಾಥ (ರಾಜಣ್ಣ) ಮಾಮನಿ ಕೂಡ ಶಾಸಕರಾಗಿದ್ದರು.

2000ರಿಂದ 2002ರ ಅವಧಿಯಲ್ಲಿ ಆನಂದ್‌ ಮಾಮನಿ ಅವರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. ಅಲ್ಲದೆ, 2005 ಹಾಗೂ 2008ರಲ್ಲಿ ಸವದತ್ತಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004ರಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಇವರು, 2008ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬಿಜೆಪಿ ಸೇರ್ಪಡೆಯಾದರು. ಇದೇ ವರ್ಷ ಮೊದಲ ಬಾರಿ ಸವದತ್ತಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಮಾಮನಿ, 2018ರಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದರು. ಎರಡು ಬಾರಿ ಬೆಳಗಾವಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2019ರಲ್ಲಿ ಎಚ್.ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಯರಗಟ್ಟಿಯನ್ನು ನೂತನ ತಾಲೂಕಾ ಕೇಂದ್ರವನ್ನಾಗಿ ಘೋಷಿಸಲಾಯಿತು. ಇದಕ್ಕಾಗಿ ಶ್ರಮಿಸಿದ ಮಾಮನಿ ಅವರನ್ನು ಯರಗಟ್ಟಿ ಜನತೆ ಶ್ಲಾಘಿಸಿದ್ದಾರೆ. ತಾಲೂಕು ಆಡಳಿತ ಕಚೇರಿಗಳ ನಿರ್ಮಾಣಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಅನುದಾನ ಬಿಡುಗಡೆಗೊಳಿಸಿಲು ಪ್ರಯತ್ನಿಸಿದ್ದರು. ಒಂದೇ ಸೂರಿನಡಿ ಎಲ್ಲ ಇಲಾಖೆಗಳ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನೂ ಸಹ ನೆರವೇರಿಸಿದ್ದರು. ಮುನವಳ್ಳಿ ಗ್ರಾಮ ಪಂಚಾಯಿತಿಯಿಂದ ಪುರಸಭೆಗೆ, ಯರಗಟ್ಟಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಉನ್ನತ್ತೀಕರಣದಲ್ಲಿ ಮಾಮನಿ ಶ್ರಮ ಶ್ಲಾಘನೀಯವಾಗಿದೆ. ವಿಧಾನಸಭೆ ಪ್ರವೇಶಿಸಿ 2 ಅವಧಿವರೆಗೆ ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ ಮಾಮನಿ ಸವದತ್ತಿಯಲ್ಲಿ ಬಿಜೆಪಿ ನೆಲೆಯೂರುವಂತೆ ಮಾಡಿದರು. 2008ರಲ್ಲಿ ಮೊದಲ ಪ್ರಯತ್ನದಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿ ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರ ಜನಪರ ಕಾಳಜಿಗೆ ತಾವು ಸ್ಪರ್ಧಿಸಿದ 3 ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ್ದು ಈಗ ಇತಿಹಾಸ. ಅವರ ಅಭಿಮಾನಿ ಬಳಗವು ಆನಂದ್‌ ಮಾಮನಿ ಅವರಿಗೆ ‘ಸವದತ್ತಿ ಮೋದಿʼ ಎಂದೇ ಕರೆದಿದೆ. ಮಾಮನಿ ಅವರು ವೈಯಕ್ತಿಕ ವರ್ಚಸ್ಸು, ಬಿಜೆಪಿಯ ಅಲೆ ಬಳಸಿ ಸವದತ್ತಿಯಲ್ಲಿ ತಳ ಮಟ್ಟದಿಂದ ಪಕ್ಷವನ್ನು ಬಲಿಷ್ಠವನ್ನಾಗಿಸಿದ್ದರು. ವಿರೋಧಿಗಳನ್ನು ಸಹ ಭ್ರಾತೃತ್ವದಿಂದ ಕಾಣುವ ಸ್ವಭಾವ ಇವರದ್ದಾಗಿತ್ತು. ಗೆಳೆತನದಲ್ಲಿ ಜನುಮದ ಜೋಡಿಯಾಗಿ ಬೆಳೆದು, ರಾಜಕೀಯದಲ್ಲಿ ವೈರಿಯಾದ ಆನಂದ ಚೋಪ್ರಾ ಅವರು ನಿಧನರಾಗಿದ್ದಾಗ ಆನಂದ್‌ ಮಾಮನಿ ಅವರು ಮುಂದಾಳತ್ವ ವಹಿಸಿ ಅಂತ್ಯಸಂಸ್ಕಾರಕ್ಕೆ ನೆರವಾಗಿದ್ದರು.
ಆನಂದ್‌ ಮಾಮನಿ ಅವರ ತಂದೆ ಚಂದ್ರಶೇಖರ್‌ ಮಾಮನಿ ಅವರು ಕೂಡ ಶಾಸಕರಾಗಿದ್ದರು. ಅಲ್ಲದೆ, ಚಂದ್ರಶೇಖರ್‌ ಮಾಮನಿ ಅವರು 1990ರಲ್ಲಿ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್‌ ಆಗಿದ್ದರು. ತಂದೆಯವರಂತೆ ಆನಂದ್‌ ಮಾಮನಿ ಅವರೂ 2020ರ ಮಾರ್ಚ್‌ 24ರಂದು ವಿಧಾನಸಭೆ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೂರು ಬಾರಿ ಶಾಸಕರಾದ ಅವರಿಗೆ ಸಚಿವರಾಗಬೇಕು, ಜನರಿಗೆ ಹೆಚ್ಚಿನ ಸೇವೆ ಒದಗಿಸಬೇಕು ಎಂಬ ತುಡಿತ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ.

Related posts: