ಗೋಕಾಕ:ನಿತ್ಯ ಸತ್ಸಂಗವು ಮುಕ್ತಿಗೆ ದ್ವಾರವಾಗಿದೆ: ಬಸವರಾಜ ಶರಣರು.

ನಿತ್ಯ ಸತ್ಸಂಗವು ಮುಕ್ತಿಗೆ ದ್ವಾರವಾಗಿದೆ: ಬಸವರಾಜ ಶರಣರು.
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :
ಕೇವಲ ಮನುಷ್ಯ ಜನ್ಮಕ್ಕೆ ಮಾತ್ರ ಸತ್ಸಂಗದ ಭಾಗ್ಯವಿದ್ದು, ನಿತ್ಯವೂ ಸತ್ಸಂಗದಿಂದ ಜೀವನ್ಮುಕ್ತಿ ಸಾಧ್ಯವಿದೆ ಎಂದು ಸಮಿಪದ ಗೋಕಾಕ್ ಫಾಲ್ಸ್ ನ ಬಸವರಾಜ ಶರಣರು ಹೇಳಿದರು.
ರವಿವಾರಂದು ನಗರದ ಶ್ರೀ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 158 ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಹುಟ್ಟು ಸಾವುಗಳಿಂದ ಕೂಡಿರುವದು ಭವ. ಇದು ಚಕ್ರದಂತೆ ತಿರುಗುತ್ತಿರುತ್ತದೆ. ಭವಬಂಧನಕ್ಕೆ ಕಾರಣವಾಗಿರುವ ಪಂಚಪಾಶಗಳಲ್ಲಿ ಮಾನವ ಮೈ ಮರೆತು ಭಗವಂತನ ಸ್ಮರಣೆ, ಶಿವಧ್ಯಾನ ಮರೆತು ಹೋಗಿದ್ದೇವೆ. ಇದರಿಂದ ಭವಬಂಧನಗಳಿಂದ ಮುಕ್ತರಾಗಲು ಸಾಧ್ಯವಿಲ್ಲ. ನಿತ್ಯವೂ ಶರಣರ ಸಂಗ- ಸತ್ಸಂಗದಿಂದ ಭಗವಂತನನ್ನು ಪರಿಪೂರ್ಣವಾಗಿ ಅರಿತುಕೊಳ್ಳುವುದು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಪ.ಪೂ. ಶ್ರೀ ಮ.ನಿ.ಪ್ರ. ಮುರುಘರಾಜೇಂದ್ರ ಮಹಾಸ್ವಾಮೀಜಿ ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಬಸಣಗೌಡಾ ಪಾಟೀಲ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ, ಶ್ರೀಮತಿ ಸುಮಿತ್ರಾ ಕಾಳಪ್ಪಾ ಗುರಾಣಿ, ದಾಸೋಹಿಗಳಾದ ಎಮ್. ಎಸ್. ಎಕ್ಸಂಬಿ, ಬಿ.ಎಸ್. ಕೋಳ್ಳೂರಮಠ, ಶ್ರೀಮತಿ ಅನುಸೂಯಾ ಎಸ್. ಪಾಟೀಲ ಉಪಸ್ಥಿತರಿದ್ದರು.
ಶಿಕ್ಷಕ ಆರ್. ಎಲ್. ಮಿರ್ಜಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಎಸ್. ಕೆ. ಮಠದ ವಂದಿಸಿದರು.