ಗೋಕಾಕ:ಅರವಿಂದ ದಳವಾಯಿ ಹೇಳಿಕೆ ಬಾಲಿಷತನದಿಂದ ಕೂಡಿದೆ : ಡಾ|| ರಾಜೇಂದ್ರ ಸಣ್ಣಕ್ಕಿ
ಅರವಿಂದ ದಳವಾಯಿ ಹೇಳಿಕೆ ಬಾಲಿಷತನದಿಂದ ಕೂಡಿದೆ : ಡಾ|| ರಾಜೇಂದ್ರ ಸಣ್ಣಕ್ಕಿ
ಗೋಕಾಕ ಅ 3: ಕೌಜಲಗಿ ಪಟ್ಟಣವನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಸೇರ್ಪಡೆಯಾಗಲಿ ಎಂದು ಮುಖಂಡ ಅರವಿಂದ ದಳವಾಯಿ ಅವರ ಹೇಳಿಕೆಗೆ ನಿಯೋಜಿತ ಕೌಜಲಗಿ ತಾಲೂಕು ಚಾಲನಾ ಹೋರಾಟ ಸಮಿತಿಯು ಆಕ್ಷೇಪ ವ್ಯಕ್ತ ಪಡಿಸಿದೆ.
ಈ ಕುರಿತು ಮಂಗಳವಾರದಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಸಮಿತಿಯ ಅಧ್ಯಕ್ಷ ಮಹಾದೇವಪ್ಪ ಭೋವಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ|| ರಾಜೇಂದ್ರ ಸಣ್ಣಕ್ಕಿ ಅವರು, ಅರವಿಂದ ದಳವಾಯಿ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 4 ದಶಕಗಳಿಂದ ತಾಲೂಕಾ ಸ್ಥಾನಮಾನಕ್ಕಾಗಿ ನಿರಂತರ ಹೋರಾಟ ಮಾಡುತ್ತಿರುವ ಕೌಜಲಗಿಯು ತಾಲೂಕಾ ಸ್ಥಳವಾಗಲು ಯೋಗ್ಯವಿದೆ. ಹಿಂದಿನ ವಾಸುದೇವರಾವ, ಹುಂಡೆಕಾರ ಹಾಗೂ ಗದ್ದಿಗೌಡರ ನೇತೃತ್ವದ ಆಯೋಗಗಳು ಕೌಜಲಗಿಯನ್ನು ಶಿಫಾರಸ್ಸು ಮಾಡಿ ಆಗಿನ ಸರ್ಕಾರಗಳಿಗೆ ವರದಿ ಸಲ್ಲಿಸಿದ್ದವು. ಆದರೆ ಎಮ್.ಬಿ.ಪ್ರಕಾಶ ನೇತೃತ್ವದ ಆಯೋಗ ಮಾತ್ರ ಕೌಜಲಗಿ ತಾಲೂಕು ಅನುಷ್ಠಾನಕ್ಕೆ ಶಿಫಾರಸ್ಸು ಮಾಡದೇ ನಮ್ಮ ಹೋರಾಟಕ್ಕೆ ಅನ್ಯಾಯ ಮಾಡಿತ್ತು. ಆದಾಗ್ಯೂ ಕೌಜಲಗಿ ತಾಲೂಕು ರಚನೆಕ್ಕಾಗಿ ಹೋರಾಟ ಕೈ ಬಿಟ್ಟಿಲ್ಲ. ಇದು ಅರವಿಂದ ದಳವಾಯಿ ಅವರಿಗೂ ಗೊತ್ತಿದೆ. ದಳವಾಯಿ ಅವರು ಚಾಲನಾ ಸಮಿತಿಯ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ದಳವಾಯಿ ಅವರು ಯಾವುದೋ ರಾಜಕೀಯ ದುರುದ್ದೇಶದಿಂದ ಈ ಹೇಳಿಕೆ ನೀಡಿರುವುದು ಖಂಡನೀಯ. ತಮ್ಮ ಹೇಳಿಕೆಯನ್ನು ವಾಪಸ್ಸು ಪಡೆದು ಸಾರ್ವಜನಿಕ ಕ್ಷಮಾಪಣೆ ಕೇಳುವಂತೆ ಅವರು ಆಗ್ರಹಿಸಿದ್ದಾರೆ.
ಮೂಡಲಗಿ ತಾಲೂಕು ರಚನೆಗೆ ನಮ್ಮ ಅಭ್ಯಂತರವಿಲ್ಲ, ಆದರೆ ಮೂಡಲಗಿಗೆ ನಾವು ಪ್ರತಿಸ್ಪರ್ಧಿ ಇದ್ದೇವೆ ಎಂಬುದನ್ನು ದಳವಾಯಿ ಯಾಕೆ ಅರಿಯಲಿಲ್ಲ, ಸಾಕಷ್ಟು ವಿದ್ಯಾವಂತರಾಗಿ, ಅಧಿಕಾರಿಯಾಗಿ ಹೆಸರುವಾಸಿಯಾದ ದಳವಾಯಿ ಅವರು ಇಷ್ಟು ಕೀಳು ಮಟ್ಟಕ್ಕೆ ಇಳಿದು ಸ್ವಂತ ಊರಿಗೆ ಅಪಚಾರವೆಸೆದೂ ಯಾವುದೋ ಸ್ವಹಿತಕ್ಕಾಗಿ ಮೂಡಲಗಿ ಪರ ಬ್ಯಾಟಿಂಗ್ ಮಾಡಿರುವುದು ಹೆತ್ತ ತಾಯಿಗೆ ದ್ರೋಹ ಬಗೆದಂತಾಗಿದೆ. ಇದರಿಂದ ದಳವಾಯಿ ಅವರು ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಒಂದು ವೇಳೆ ತಾಲೂಕು ರಚನೆಯಲ್ಲಿ ಕೌಜಲಗಿಯನ್ನು ಕೈಬಿಟ್ಟು ಮೂಡಲಗಿಯನ್ನು ತಾಲೂಕು ಕೇಂದ್ರ ಮಾಡಿದರೇ ಕೌಜಲಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಮೂಡಲಗಿಗೆ ಮಾತ್ರ ಹೋಗುವದಿಲ್ಲ. ಮೂಡಲಗಿಗಿಂತ ಮುಂಚೆ ಕೌಜಲಗಿ ತಾಲೂಕು ರಚನೆಗಾಗಿ ಹೋರಾಟ ಮಾಡಿದೆ ಎಂಬುದನ್ನು ದಳವಾಯಿಯವರು ಮರೆಯಬಾರದು ಎಂದು ಭೋವಿ ಹಾಗೂ ಸಣ್ಣಕಿ ಖಾರವಾಗಿ ಪ್ರತಿಕ್ರೀಯಿಸಿದ್ದಾರೆ.