ಗೋಕಾಕ:ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ : ಡಾ.ಸಂಜಯ ಹೋಸಮಠ
ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ : ಡಾ.ಸಂಜಯ ಹೋಸಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 25 :
ಬೇಡ-ಜಂಗಮರ ಹಕ್ಕಿಗಾಗಿ ನ್ಯಾಯಸಮ್ಮತ ಹೋರಾಟ ನಡೆಸುತ್ತಿದ್ದಾರೆ ಹೊರತು ಯಾರೊಬ್ಬರ ಹಕ್ಕನ್ನು ಕಸಿದುಕೊಂಡು, ಮೀಸಲಾತಿ ನೀಡಿ ಎಂಬು ಕೇಳುತ್ತಿಲ್ಲ’ ಎಂದು ಡಾ. ಸಂಜಯ ಹೊಸಮಠ ಹೇಳಿದರು .
ಶುಕ್ರವಾರದಂದು ಸಾಯಂಕಾಲ ಇಲ್ಲಿನ ಮುಪ್ಪಯ್ಯಸ್ವಾಮಿ ಹಿರೇಮಠದಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ (ಬೆಳಗಾವಿ ವಿಭಾಗ) ಗೋಕಾಕ ತಾಲ್ಲೂಕಿನ ಸಂಘಟನೆಗಳು ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಬೇಡ ಜಂಗಮರ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಸ್ತ ಜಂಗಮ ಸಮುದಾಯಕ್ಕೆ ಬೇಸರವನ್ನುಂಟು ಮಾಡಿದೆ. ಯಾವುದೇ ಜನಾಂಗ ಮೀಸಲಾತಿ ಕೇಳಲು ಮತ್ತು ಒದಗಿಸಲು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಸಂಪೂರ್ಣ ಅಧ್ಯಯನ ನಡೆಸುವುದು ಸದನದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ, ಕೇವಲ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಸದನದಲ್ಲಿದ್ದಾಗ ಮೀಸಲಾತಿಗೆ ಸಂಬಂಧಪಟ್ಟ ಪ್ರಮುಖ ವಿಷಯಗಳನ್ನು ಚರ್ಚೆ ನಡೆಸಲು ಅವಕಾಶ ಕಲ್ಪಿಸುತ್ತಿರುವುದು ಎಷ್ಟು ಸಮಂಜಸ ಎಂದ ಅವರು
ಬೇಡ ಜಂಗಮರ ಮೀಸಲಾತಿ ಕುರಿತು ಸದನದಲ್ಲಿ ಪ್ರಸ್ತುತ ನಡೆಯುತ್ತಿರುವ ಚರ್ಚೆ ಕೇವಲ ನಾಣ್ಯದ ಒಂದು ಮುಖ ಮಾತ್ರ. ವಾಸ್ತವಿಕವಾಗಿ, ಬೇಡ ಜಂಗಮರ ಮೀಸಲಾತಿ ಅಪೇಕ್ಷಿತರ ಒಕ್ಕೂಟ ಸಿದ್ಧ ಪಡಿಸಿರುವ ದಾಖಲೆಗಳು ಮತ್ತು ಇತರೆ ವಾದವನ್ನು ಪರಿಗಣಿಸಿ ಇಲ್ಲವೇ ಪುರಸ್ಕರಿಸಿದಾಗ ಮಾತ್ರ ಚರ್ಚಾ ವಿಷಯಕ್ಕೆ ಒಂದು ಬೆಲೆ ಇದೆ ಎಂದು ಹೇಳಿದರು .
ಸಮಾಜ ಕಲ್ಯಾಣ ಇಲಾಖೆ ಈ ವಿಷಯವಾಗಿ, ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಮತ್ತು ವಿಷಯ ಪ್ರತಿಪಾಧಕರನ್ನು ಸೇರಿಸಿಕೊಂಡು ಸಭೆ ನಡೆಸಿದಾಗ ಮಾತ್ರ ಪರ ಇಲ್ಲವೇ ವಿರೋಧ ಧ್ವನಿಗಳ ಹಿಂದೆ ಅಡಗಿರುವ ಸತ್ಯ ಹೊರಬರಲು ಸಾಧ್ಯ ಆ ನಿಟ್ಟಿನಲ್ಲಿ ಸರಕಾರ ಮುಂದೆ ಬಂದು ತಜ್ಞರ ಸಮಿತಿ ರಚನೆ ಮಾಡಿ ಅವರ ನೀಡುವ ವರದಿ ಆಧರಿಸಿ ಸಮಾಜಿಕವಾಗಿ, ಶೈಕ್ಷಣಿಕವಾಗಿ , ಆರ್ಥಿಕವಾಗಿ ಹಿಂದುಳಿದ ಬೇಡ ಜಂಗಮ ಸಮಾಜಕ್ಕೆ ನ್ಯಾಯ ಕೊಡಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮುಪ್ಪಯ್ಯಸ್ವಾಮಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಒಕ್ಕೂಟದ ತಾಲ್ಲೂಕು ಸಂಚಾಲಕ ಗುರುಬಸಯ್ಯ ಕರ್ಪೂರಮಠ, ನಗರ ಘಟಕ ಸಂಚಾಲಕ ಪ್ರಕಾಶ ಕಂಬಿ, ಕಪರಟ್ಟಿಯ ಪ್ರವಚನ ಪಟು ಬಸವರಾಜ ಹಿರೇಮಠ, ಸಿದ್ಧಲಿಂಗಯ್ಯ ಹಿರೇಮಠ, ಈರಣ್ಣಾ ಪೂಜಾರಿ, ಕೆಂಪಯ್ಯಾ ಪುರಾಣಿಕಮಠ, ಜಗದೀಶ ನಿರ್ವಾಣಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.