ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರ ಬೃಹತ್ ಪ್ರತಿಭಟನೆ
ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರ ಬೃಹತ್ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :
ಕೇಂದ್ರ ಸರಕಾರ ಗಣರಾಜ್ಯೋತ್ಸವ ದಿನದಂದು ಶ್ರೀ ನಾರಾಯಣ ಗುರುಗಳು ಮತ್ತು ಸುಭಾಷಚಂದ್ರ ಭೋಸರ ಸ್ಥಬ್ದ ಚಿತ್ರಗಳನ್ನು ನಿರಾಕರಿಸಿರುವುದನ್ನು ಖಂಡಿಸಿ ಇಲ್ಲಿನ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ಅವರು ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ಭಂಗ ತರುವ ಮೂಲಕ ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದೆ. ಕೇಂದ್ರ ಸರಕಾರವನ್ನು ಸಮರ್ಥಿಸುವ ಭರದಿಂದ ನಮ್ಮ ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಜನಪ್ರತಿನಿಧಿಗಳು ಸುಳ್ಳುಗಳನ್ನು ಹೇಳುತ್ತಾ , ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. 19 ನೇ ಶತಮಾನದಲ್ಲಿ ಶ್ರೀ ನಾರಾಯಣ ಗುರುಗಳು ವೈದಿಕಶಾಹಿ ಹೇರಿದ್ದ ಜಾತಿ ವ್ಯವಸ್ಥೆಯನ್ನು ಕೀಳು ತಾರತಮ್ಯಗಳ ಹಾಗೂ ಅಸ್ಪೃಶ್ಯತೆ ವಿರುದ್ಧ ಬಹುದೊಡ್ಡ ಸಮರ ಸಾರಿ ಲಕ್ಷಾಂತರ ಜನರನ್ನು ದಾಸ್ಯದಿಂದ ವಿಮೋಚನೆಗೊಳಿಸಿದ್ದರು. ಒಂದು ಜಾತಿ , ಒಂದು ಧರ್ಮ, ಒಂದೇ ದೇಶ ಎಂಬ ಅವರ ಸಂದೇಶ ಮನುಕುಲವನ್ನು ಒಗ್ಗೂಡಿಸುವ ತತ್ವವಾಗಿದ್ದು ಜಗತ್ತಿನಾದ್ಯಂತ ಜಗತ್ತಿನನಾದ್ಯಂತ ಶ್ರೀ ನಾರಾಯಣ ಗುರುಗಳ ಆಧ್ಯಾತ್ಮವನ್ನು ಆರಾಧಿಸುವವರು ಲಕ್ಷಾಂತರ ಜನ ಸಮೂಹ ಇದೆ. ಜಾತಿ ವ್ಯವಸ್ಥೆ ಹೇರುವ ಆಧ್ಯಾತ್ಮವೇ ಬೇಡ ಎಂದ ಅವರು ಬಸವಣ್ಣನವಂತೆ ಪರ್ಯಾಯ ಆಧ್ಯಾತ್ಮ ದೇವಾಲಯಗಳನ್ನು ನೀಡಿದರು. ಅವರ ಸಂದೇಶಗಳ ಮೂಲಕ ಕೇರಳ ರಾಜ್ಯ ಇಂದು ಜಗತ್ತೆ ನಿಬ್ಬೆರಗಾಗುವಂತೆ ಶೈಕ್ಷಣಿಕವಾಗಿ ಬೆಳೆದು ನಿಂತಿದೆ. ಯಾವುದೇ ಬಲವಾದ ಕಾರಣ ನೀಡದೆ ಕೇಂದ್ರ ಸರಕಾರ ಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರ ತಿರಸ್ಕರಿಸಿರುವುದು ಹಿಂದುಳಿದ ವರ್ಗಗಳ ಮಹಾನ ಚೇತನವನ್ನು ಅಪಮಾನಿಸುವ ಕ್ರಮವಾಗಿದೆ.ಅಷ್ಟೇ ಅಲ್ಲದೆ ಕೇಂದ್ರ ಸರಕಾರ ಪಶ್ಚಿಮ ಬಂಗಾಳದ ಮಹಾನ ಸ್ವಾತಂತ್ರ್ಯ ಹೋರಾಟಗಾರ ಸುಭಾಷಚಂದ್ರ ಭೋಸ ಮತ್ತು ತಮಿಳುನಾಡಿನ ಸಾಹಿತ್ಯ ಸಂಸ್ಕೃತಿಗಳ ಚಿತ್ರಣಗಳ್ಳುಳ ಸ್ಥಬ್ದ ಚಿತ್ರಗಳನ್ನು ಅಪಮಾನಿಸಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕೂಡಲೇ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ಮತ್ತು ಶಾಲಾ ಕಾಲೇಜುಗಳಲ್ಲಿ ತಿಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ, ವಿವಿಧ ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.