ಗೋಕಾಕ:ತಾಯಿ ಹಾಲು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ : ಶಿವಾನಂದ ಹಿರೇಮಠ
ತಾಯಿ ಹಾಲು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ : ಶಿವಾನಂದ ಹಿರೇಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 5 :
ಮಗುವಿಗೆ ತಾಯಿ ಹಾಲಿಗಿಂತ ಪೌಷ್ಠಿಕವಾದ ಆಹಾರ ಬೇರೊಂದಿಲ್ಲ ಎಂದು ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಗುರುವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಯಿ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿದ್ದು, ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತಾಯಂದಿರು ಸೌಂದರ್ಯಕ್ಕೆ ಮಹತ್ವ ನೀಡಿ ಮಗುವಿಗೆ ಎದೆ ಹಾಲಿನಿಂದ ವಂಚಿತರನ್ನಾಗಿ ಮಾಡದೆ ಮಗುವಿಗೆ ವೈದ್ಯರ ಸಲಹೆಯಂತೆ ಎದೆ ಹಾಲನ್ನು ನೀಡಿ ಅವರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು.
ಆಶಾ ಕಾರ್ಯಕರ್ತರು , ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಸ್ತನ್ಯಪಾನದ ಕುರಿತು ತಾಯಂದಿರಲ್ಲಿ ಜಾಗೃತಿ ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಉದ್ಘಾಟಿಸಿದರು.
ಸ್ತನ್ಯಪಾನ ಮಹತ್ವದ ಕುರಿತು ಡಾ. ಪ್ರೀತಿ ವಣ್ಣೂರ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟಿನ, ಶಿಶು ಅಭಿವೃದ್ಧಿ ಅಧಿಕಾರಿ ಜಯಶ್ರೀ ಶಿಲವಂತ, ನಗರಸಭೆ ಸದಸ್ಯೆ ಶ್ರೀಮತಿ ವೆಂಕವ್ವ ಶಾಸ್ತ್ರಿಗೋಲ್ಲರ, ಡಾ.ದೀಪಾ ತುಬಾಕಿ, ಡಾ. ಪವಿತ್ರಾ ದಂಡಿನ , ಡಾ.ಗೋಪಾಲ ಹೊಂಗಲ, ಡಾ.ಸಂಜೀವಿನಿ ಉಮರಾಣಿ , ಡಾ.ಮೇಘನಾ ಎನ್, ಮುಖಂಡ ದುರ್ಗಪ್ಪ ಶಾಸ್ತ್ರಿಗೊಲ್ಲರ ಉಪಸ್ಥಿತರಿದ್ದರು.